* ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಇಂಗ್ಲೆಂಡ್ ಆರಂಭಿಕರು* ಮೊದಲ ಇನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ* ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್
ಮೆಲ್ಬೊರ್ನ್(ಡಿ.27): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs Engladn) ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series), ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಇಂಗ್ಲೆಂಡ್ ಅಗ್ರಕ್ರಮಾಂಕ ಮತ್ತೊಮ್ಮೆ ದಿಢೀರ್ ಕುಸಿತ ಕಂಡಿದೆ. 82 ರನ್‌ಗಳ ಇನಿಂಗ್ಸ್ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ಇಂಗ್ಲೆಂಡ್ ಕ್ರಿಕೆಟ್ ತಂಡವು (England Cricket Team) ಎರಡನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 31 ರನ್ ಬಾರಿಸಿದ್ದು, ಇನ್ನೂ 51 ರನ್‌ಗಳ ಹಿನ್ನೆಡೆಯಲ್ಲಿದೆ.
ಇಲ್ಲಿನ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ, ಮೊದಲ ದಿನದಾಟದ ಕೊನೆಯಲ್ಲಿ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿತ್ತು. ಅಂತಿಮವಾಗಿ ಇಂಗ್ಲೆಂಡ್ ವೇಗಿಗಳ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಆಸ್ಟ್ರೇಲಿಯಾ 267 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 82 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು. ಇನ್ನು ಎರಡನೇ ದಿನದಾಟದ ಕೊನೆಯಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು.
ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು: 82 ರನ್‌ಗಳ ಇನಿಂಗ್ಸ್ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ತನ್ನ ಖಾತೆಗೆ 7 ರನ್ ಸೇರಿಸುಷ್ಟರಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜಾಕ್ ಕ್ರಾವ್ಲಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮರು ಎಸೆತದಲ್ಲೇ ಡೇವಿಡ್ ಮಲಾನ್ ಕೂಡಾ ಶೂನ್ಯ ಸುತ್ತಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಹಸೀಬ್ ಹಮೀದ್(07), ವೇಗಿ ಬೊಲ್ಯಾಂಡ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ನೈಟ್ ವಾಚ್‌ಮನ್ ಆಗಿ ಕಣಕ್ಕಿಳಿದ ಜಾಕ್ ಲೀಚ್ ಕೂಡಾ ಶೂನ್ಯ ಸುತ್ತಿ ಬೊಲ್ಯಾಂಡ್‌ಗೆ ಎರಡನೇ ಬಲಿಯಾದರು. ಸದ್ಯ ನಾಯಕ ಜೋ ರೂಟ್(12) ಹಾಗೂ ಬೆನ್ ಸ್ಟೋಕ್ಸ್ (2) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Ashes 2021, Boxing Day Test: ಆಸ್ಟ್ರೇಲಿಯಾ 267 ರನ್‌ಗಳಿಗೆ ಆಲೌಟ್, 82 ರನ್‌ಗಳ ಮುನ್ನಡೆ
ಇದಕ್ಕೂ ಮೊದಲು 61 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್ ಬೌಲರ್‌ಗಳು ದೊಡ್ಡ ಮೊತ್ತ ಕಲೆಹಾಕಲು ಅವಕಾಶ ನೀಡಲಿಲ್ಲ. ಆರಂಭಿಕ ಬ್ಯಾಟರ್ ಮಾರ್ಕಸ್ ಹ್ಯಾರಿಸ್ 76 ರನ್ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್‌ಗಳು ಸಹ ಎರಡನೇ ದಿನದಾಟದಲ್ಲಿ 30 ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಟೆಸ್ಟ್ ನಂಬರ್ ಒನ್ ಬ್ಯಾಟರ್ ಮಾರ್ನಸ್ ಲಬುಶೇನ್ ಕೇವಲ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಬ್ಯಾಟಿಂಗ್ 10 ರನ್‌ಗಳಿಗೆ ಸೀಮಿತವಾಯಿತು.
ಕೆಳ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ(19), ಪ್ಯಾಟ್ ಕಮಿನ್ಸ್(21) ಹಾಗೂ ಮಿಚೆಲ್ ಸ್ಟಾರ್ಕ್(24) ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ಆಸ್ಟ್ರೇಲಿಯಾ ತಂಡವು ಅಮೂಲ್ಯ ಮುನ್ನಡೆ ಗಳಿಸಲು ನೆರವಾದರು.
ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ 4 ವಿಕೆಟ್ ಪಡೆದರೆ, ಓಲಿ ರಾಬಿನ್‌ಸನ್ ಹಾಗೂ ಮಾರ್ಕ್ ವುಡ್ ತಲಾ 2 ವಿಕೆಟ್ ಪಡೆದರು. ಇನ್ನು ಬೆನ್ ಸ್ಟೋಕ್ಸ್ ಹಾಗೂ ಜಾಕ್ ಲೀಚ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 185/10(ಮೊದಲ ಇನಿಂಗ್ಸ್)
ಜೋ ರೂಟ್: 50
ನೇಥನ್ ಲಯನ್: 36/3
ಆಸ್ಟ್ರೇಲಿಯಾ: 267/10(ಮೊದಲ ಇನಿಂಗ್ಸ್)
ಮಾರ್ಕಸ್ ಹ್ಯಾರಿಸ್: 76
ಜೇಮ್ಸ್ ಆ್ಯಂಡರ್‌ಸನ್: 33/4
ಇಂಗ್ಲೆಂಡ್: 31/4(ಎರಡನೇ ಇನಿಂಗ್ಸ್)
ಜೋ ರೂಟ್: 12
ಸ್ಕಾಟ್ ಬೊಲ್ಯಾಂಡ್: 1/2
(* ಎರಡನೇ ದಿನದಾಟದಂತ್ಯದ ವೇಳೆಗೆ)
