* ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ದಿನದಾಟದಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಇಂಗ್ಲೆಂಡ್* ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಗೆ ಕೇವಲ 82 ರನ್‌ಗಳ ಮುನ್ನಡೆ* 4 ವಿಕೆಟ್ ಕಬಳಿಸಿ ಮಿಂಚಿದ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ 

ಮೆಲ್ಬೊರ್ನ್‌(ಡಿ.27): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 267 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 82 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 185 ರನ್‌ಗಳಿಗೆ ಆಲೌಟ್ ಆಗಿದ್ದ ಇಂಗ್ಲೆಂಡ್ ತಂಡವು, ಇದೀಗ ಎರಡನೇ ದಿನದಾಟದಲ್ಲಿ ಬೌಲಿಂಗ್‌ನಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ಹೌದು, ಇಲ್ಲಿನ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು, ಮೊದಲ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿತ್ತು. ಇನ್ನು ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ಆತಿಥೇಯ ಆಸ್ಟ್ರೇಲಿಯಾದ ಮೇಲೆ ಸವಾರಿ ಮಾಡಿದರು. ನೈಟ್‌ ವಾಚ್‌ಮನ್‌ ನೇಥನ್ ಲಯನ್ 10 ರನ್ ಬಾರಿಸಿ ರಾಬಿನ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು.

ಕೈಕೊಟ್ಟ ಮಧ್ಯಮ ಕ್ರಮಾಂಕ: ಕಳೆದೆರಡು ಟೆಸ್ಟ್ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗಿದ್ದ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕ ಈ ಬಾರಿ ದಿಢೀರ್ ಕುಸಿತ ಕಂಡಿತು. ಟೆಸ್ಟ್‌ ನಂಬರ್ 1 ಬ್ಯಾಟರ್‌ ಮಾರ್ನಸ್‌ ಲಬುಶೇನ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸ್ಟೀವ್ ಸ್ಮಿತ್ ಬ್ಯಾಟಿಂಗ್ ಕೇವಲ 16 ರನ್‌ಗಳಿಗೆ ಸೀಮಿತವಾಯಿತು. ಟ್ರಾವಿಸ್ ಹೆಡ್(17) ಹಾಗೂ ಕ್ಯಾಮರೋನ್ ಗ್ರೀನ್(17) ಕೂಡಾ ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಅಲೆಕ್ಸ್ ಕ್ಯಾರಿ 19, ನಾಯಕ ಪ್ಯಾಟ್ ಕಮಿನ್ಸ್‌ 21 ಹಾಗೂ ಮಿಚೆಲ್ ಸ್ಟಾರ್ಕ್‌ ಅಜೇಯ 24 ರನ್ ಬಾರಿಸುವ ಮೂಲಕ ತಂಡವು ಉಪಯುಕ್ತ ಮುನ್ನಡೆ ಸಾಧಿಸುವಲ್ಲಿ ತಂಡಕ್ಕೆ ನೆರವಾದರು.

ಇಂಗ್ಲೆಂಡ್ ತಂಡದ ಪರ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್‌ ಕೇವಲ 33 ರನ್ ನೀಡಿ 4 ವಿಕೆಟ್ ಪಡೆದರೆ, ಓಲಿ ರಾಬಿನ್‌ಸನ್ ಹಾಗೂ ಮಾರ್ಕ್‌ ವುಡ್ ತಲಾ 2 ವಿಕೆಟ್ ಪಡೆದರು. ಇನ್ನು ಬೆನ್ ಸ್ಟೋಕ್ಸ್ ಹಾಗೂ ಜಾಕ್ ಲೀಚ್ ತಲಾ ಒಂದೊಂದು ವಿಕೆಟ್ ಪಡೆದರು.

5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಜಯಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆ್ಯಷಸ್ ಟೆಸ್ಟ್ ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಇಂಗ್ಲೆಂಡ್ ತಂಡವು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.