ನವದೆಹಲಿ(ಫೆ.01): 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನೂ ಬಿಸಿಸಿಐ ಸಿದ್ಧಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪ್ರತಿಷ್ಠಿತ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

‘ಅಂತಿಮ ನಿರ್ಧಾರ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಏಪ್ರಿಲ್‌ 11ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಮಾರ್ಚ್ 28ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ಆಟಗಾರರಿಗೆ 2 ವಾರಗಳ ವಿಶ್ರಾಂತಿ ಸಿಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 14ನೇ ಆವೃತ್ತಿಯ ಫೈನಲ್‌ ಪಂದ್ಯ ಜೂನ್‌ 5 ಇಲ್ಲವೇ 6ರಂದು ನಡೆಯಲಿದೆ ಎನ್ನಲಾಗಿದೆ.

5 ಕ್ರೀಡಾಂಗಣಗಳಲ್ಲಿ ಲೀಗ್‌ ಪಂದ್ಯಗಳು?

2020ರ ಆವೃತ್ತಿಯ ಒಟ್ಟು 60 ಪಂದ್ಯಗಳನ್ನು ಕೇವಲ 3 ಕ್ರೀಡಾಂಗಣಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದ ಬಿಸಿಸಿಐ, 2021ರ ಆವೃತ್ತಿಯ ಲೀಗ್‌ ಹಂತಕ್ಕೆ 5 ಕ್ರೀಡಾಂಗಣಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಮುಂಬೈನಲ್ಲೇ ಒಟ್ಟು 4 ಕ್ರೀಡಾಂಗಣಗಳಿವೆ. ವಾಂಖೇಡೆ, ಬ್ರಾಬೋನ್‌ ಕ್ರೀಡಾಂಗಣ, ನವಿ ಮುಂಬೈನಲ್ಲಿರುವ ಡಿ.ವೈ.ಪಾಟೀಲ್‌ ಹಾಗೂ ರಿಲಯನ್ಸ್‌ ಕ್ರಿಕೆಟ್‌ ಕ್ರೀಡಾಂಗಣ, ಪುಣೆಯ ಹೊರಭಾಗದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಲೀಗ್‌ ಹಂತದ 56 ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಪ್ಲೇ-ಆಫ್‌ ಹಂತದ 4 ಪಂದ್ಯಗಳು ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಮೊಟೇರಾದಲ್ಲಿ ನಡೆಸಲು ಬಿಸಿಸಿಐ ಮುಂದಾಗಲಿದೆ ಎಂದು ವರದಿಯಲ್ಲಿದೆ.

IPL 2021: ಫ್ರಾಂಚೈಸಿ ಈ 5 ಆಟಗಾರರನ್ನು ಉಳಿಸಿಕೊಂಡಿದ್ದೇಕೆ..? ಉತ್ತರ ಸಿಗದ ಪ್ರಶ್ನೆ..!

ಮೊಟೇರಾ ಕ್ರೀಡಾಂಗಣದಲ್ಲಿ ಈಗಾಗಲೇ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ನಾಕೌಟ್‌ ಪಂದ್ಯಗಳು ನಡೆದಿದ್ದು, ಐಪಿಎಲ್‌ಗೂ ಮುನ್ನ ಭಾರತ ಹಾಗೂ ಇಂಗ್ಲೆಂಡ್‌ ನಡುವೆ 2 ಟೆಸ್ಟ್‌ ಹಾಗೂ 5 ಟಿ20 ಪಂದ್ಯಗಳು ನಡೆಯಲಿವೆ.

ಭಾರತದಲ್ಲೇ ಆಯೋಜನೆಗೆ ಕಾರಣವೇನು?:

ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಹೆಚ್ಚಿಗೆ ಒತ್ತು ನೀಡುತ್ತಿರುವುದಕ್ಕೂ ಕಾರಣವಿದೆ. ಇತ್ತೀಚಿಗೆ ಯುಎಇನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಈಗಾಗಲೇ ಲಸಿಕೆ ನೀಡಿಕೆ ಸಹ ಆರಂಭಗೊಂಡಿದೆ.

ಇದೇ ವಿಚಾರವಾಗಿ ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಯುಎಇ ಆಯ್ಕೆಯನ್ನು ಬಿಸಿಸಿಐ ಕೈಬಿಡಲು ಯೋಚಿಸುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಆಟಗಾರರಿಗೆ ಕೊರೋನಾ ಲಸಿಕೆ ನೀಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಸಿಐ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯನ್ನು ಬಯೋ ಬಬಲ್‌ನಲ್ಲಿ ನಡೆಸಿ ಯಶಸ್ಸು ಕಂಡಿದೆ. ಇದೀಗ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌, ಟಿ20 ಹಾಗೂ ಏಕದಿನ ಸರಣಿಗಳು ಸಹ ಬಯೋ ಬಬಲ್‌ನಲ್ಲಿ ನಡೆಯಲಿದ್ದು, ವಿಜಯ್‌ ಹಜಾರೆ ಏಕದಿನ ಟೂರ್ನಿ ಸಹ ನಡೆಸಲು ಮುಂದಾಗಿದೆ. ಬಯೋ ಬಬಲ್‌ನಲ್ಲಿ ಟೂರ್ನಿ ಹೇಗೆ ನಡೆಸಬೇಕು ಎನ್ನುವ ಅನುಭವ ಬಿಸಿಸಿಐಗಿದ್ದು, ಭಾರತದಲ್ಲೇ ಆಯೋಜಿಸಿದರೆ ಬ್ರ್ಯಾಂಡ್‌ ಮೌಲ್ಯ, ಜಾಹೀರಾತು ಆದಾಯ, ಟೀವಿ ಜಾಹೀರಾತು ಮೌಲ್ಯ ಹೆಚ್ಚಾಗಲಿದೆ. ಜೊತೆಗೆ ಆಯೋಜನೆ ಸುಲಭವಾಗಲಿದೆ ಎನ್ನುವುದನ್ನು ಬಿಸಿಸಿಐ ಮನಗಂಡಿದೆ. ಫೆ.18ಕ್ಕೆ ಚೆನ್ನೈನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.