Kannada Rajyotsava|ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ ಕ್ರೀಡಾ ತಾರೆಯರು..!
* ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವ ಆಚರಣೆ
* ಟ್ವೀಟ್ ಮೂಲಕ ಶುಭಕೋರಿದ ಕ್ರೀಡಾತಾರೆಯರು
* ನಾಲ್ವರು ಕ್ರೀಡಾ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು(ನ.01): ಕರ್ನಾಟಕ ರಾಜ್ಯಾದ್ಯಂತ ಸೋಮವಾರವಾದ ಇಂದು(ನ.01) ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡಿಗರ ಹಬ್ಬ ರಾಜ್ಯೋತ್ಸವಕ್ಕೆ ಪ್ರಧಾನಿ ಮೋದಿಯಾದಿಗಾಗಿ ಹಲವು ಗಣ್ಯರು ಶುಭಕೋರಿದ್ದಾರೆ. ಅದೇ ರೀತಿ ಕ್ರೀಡೆಯಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ ಕ್ರೀಡಾ ತಾರೆಯರು ಸಹಾ ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ್ದಾರೆ.
ಕನ್ನಡ ರಾಜ್ಯೋತ್ಸವಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಸುನಿಲ್ ಜೋಶಿ, ದೊಡ್ಡ ಗಣೇಶ್ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಎಲ್ಲೇ ಇರು, ಹೇಗೇ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಸಾಲನ್ನು ಚಾಚುತಪ್ಪದೇ ಪಾಲಿಸುವ ಅನಿಲ್ ಕುಂಬ್ಳೆ, ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದು ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ವೇಗಿ ದೊಡ್ಡ ಗಣೇಶ್ ಕೂಡಾ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ. ಕರ್ನಾಟಕ ತನ್ನ ಮನೆಮಗನನ್ನು ಕಳೆದುಕೊಂಡು ಈಗ ಸೂತಕದ ಮನೆ ಆಗಿದೆ. ಈ ನಡುವೆ ರಾಜ್ಯೋತ್ಸವ, ದೀಪಾವಳಿಯ ಸಂಭ್ರಮ ಕಳೆಗುಂದಿದೆ. ಕನ್ನಡತನವನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ. ಕನ್ನಡಿಗರೆಲ್ಲರಿಗೂ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು. ಸಿರಿಗನ್ನಡಮ್ ಗೆಲ್ಗೆ ಸಿರಿಗನ್ನಡಮ್ ಬಾಳ್ಗೆ ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಸಮಿತಿ ಸದಸ್ಯ ಸುನಿಲ್ ಜೋಶಿ, ಕರ್ನಾಟಕದ ಎಲ್ಲ ಕೋಟಿ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮತ್ತು ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಎಲ್ಲರಿಗೂ, ನಾಡ ಹಬ್ಬ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಟ್ವೀಟ್ ಮಾಡಿದ್ದಾರೆ.
ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಎಸ್‌ನಲ್ಲಿ ಬೆಂಗಳೂರು ತಂಡ ಪ್ರತಿನಿಧಿಸುವ ಬೆಂಗಳೂರು ಎಫ್‌ಸಿ ತಂಡಗಳು ಟ್ವೀಟ್ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ.
"ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ." 66 ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ಎಂದು ಆರ್‌ಸಿಬಿ ಟ್ವೀಟ್ ಮಾಡುವ ಮೂಲಕ ಕನ್ನಡಾಭಿಮಾನವನ್ನು ಮೆರೆದಿದೆ.
ಎಲ್ಲಿದ್ದರೆ ಏನ್ ಎಂತ್ತಿದ್ದರೆ ಏನ್ ಎಂದೆಂದಿಗೂ ತಾನ್, ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಒಂದು ಕ್ಲಬ್ ಆಗಿ, ಕನ್ನಡ ಮತ್ತು ಕರ್ನಾಟಕದ ಹಿರಿಮೆಯನ್ನು ಇನ್ನೂ ಉಜ್ವಲವಾಗಿ ಬೆಳಗಿಸಲು ನಾವು ಸಾಧ್ಯವಾದುದೆಲ್ಲವನ್ನೂ ಮಾಡುತ್ತೇವೆ. ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಬೆಂಗಳೂರು ಎಫ್‌ಸಿ ಟ್ವೀಟ್ ಮಾಡಿ ಕನ್ನಡಿಗರ ಹಬ್ಬಕ್ಕೆ ಶುಭ ಕೋರಿದೆ
1956ರ ನವೆಂಬರ್ 01ರಂದು ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಕನ್ನಡ ಮಾತನಾಡುವ ಜನರನ್ನೊಳಗೊಂಡ ಭಾಗವನ್ನು ಮೈಸೂರು ರಾಜ್ಯ ಎಂದು ಘೋಷಿಸಲಾಯಿತು. ಇದಾದ ಬಳಿಕ 1973ರ ನವೆಂಬರ್ 01ರಂದು ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸ್ ಅವರು ಮೈಸೂರು ರಾಜ್ಯದ ಬದಲಿಗೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಈ ದಿನವನ್ನು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ.
ಗ್ರ್ಯಾನ್ ಸ್ಲಾಂ ವಿಜೇತ ಟೆನಿಸ್ ಆಟಗಾರ ರೋಹನ್ ಬೋಪಣ್ಣ, ವೀಲ್ಹ್‌ಚೇರ್ ಟೆನಿಸ್ ಆಟಗಾರ ಕೆ.ಗೋಪಿನಾಥ್, ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ರೋಹಿತ್ ಕುಮಾರ್ ಕಟೀಲ್ ಹಾಗೂ ಕಬಡ್ಡಿ ಆಟಗಾರ ಎ.ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.