ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ಎಂ.ಎಸ್. ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಬದಲಾಗಿ, ಧೋನಿಯ ನಾಯಕತ್ವದಲ್ಲೇ ತಮಗೆ ತಂಡದಲ್ಲಿ ಅವಕಾಶ ಸಿಕ್ಕಿದ್ದು ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಭಾರತ ತಂಡವು ಯಶಸ್ವಿಯಾಗಿತ್ತು. ಧೋನಿ ನಾಯಕತ್ವದಲ್ಲಿ ಸಾಕಷ್ಟು ಯುವ ಆಟಗಾರರು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಇದೆಲ್ಲದರ ನಡುವೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರೊಬ್ಬರು ಧೋನಿ ಕುರಿತಂತೆ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, ಟೀಂ ಇಂಡಿಯಾ ಸ್ಟಾರ್ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ಒಂದು ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿದ್ದರೂ ಕೆಲವೇ ಕೆಲವು ಪಂದ್ಯಗಳನ್ನಷ್ಟೇ ಆಡಲು ಶಕ್ತರಾದರು. ಈ 9 ವರ್ಷಗಳ ಅವಧಿಯಲ್ಲಿ ಅಮಿತ್ ಮಿಶ್ರಾ ಭಾರತ ಪರ ಕೇವಲ 68 ಅಂತಾರಾಷ್ಟ್ರೀಯ ಪಂದ್ಯಗಳನ್ನಷ್ಟೇ ಆಡಲು ಶಕ್ತರಾದರು. ಈ ಹಿಂದೆ ಹಲವು ಮಂದಿಯ ಅಮಿತ್ ಮಿಶ್ರಾ ವೃತ್ತಿಜೀವನವನ್ನು ಧೋನಿ ಹಾಳು ಮಾಡಿದರು ಎನ್ನುತ್ತಿದ್ದರು. ಇದೀಗ ಸ್ವತಃ ಅಮಿತ್ ಮಿಶ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಈ ಬಗ್ಗೆ ತುಟಿಬಿಚ್ಚಿದ್ದಾರೆ.
ಅಮಿತ್ ಮಿಶ್ರಾ ಕ್ರಿಕೆಟ್ ಬದುಕು ಹಾಳು ಮಾಡಿದ್ರಾ ಧೋನಿ?
ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಸಂದರ್ಶನವೊಂದರಲ್ಲಿ ಈ ಕುರಿತಂತೆ ಉತ್ತರ ನೀಡಿದ್ದಾರೆ. ಧೋನಿ ನನ್ನ ಕ್ರಿಕೆಟ್ ವೃತ್ತಿಬದುಕು ಹಾಳು ಮಾಡಿದರು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅವರು ನನಗೆ ಸಾಕಷ್ಟು ಅವಕಾಶ ನೀಡಿದರು ಎಂದು ಅಮಿತ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. 'ಧೋನಿ ನಾಯಕನಾಗಿಲ್ಲದಿದ್ದರೇ ನನ್ನ ಕ್ರಿಕೆಟ್ ಬದುಕು ಇನ್ನಷ್ಟು ಚೆನ್ನಾಗಿರುತ್ತಿತ್ತು ಎಂದು ಜನರು ಹೇಳಿದ್ದನ್ನು ನಾನು ಕೇಳಿದ್ದೇನೆ. ಆದರೆ ಧೋನಿ ನಾಯಕನಾಗಿಲ್ಲದಿದ್ದರೇ ಬಹುಶಃ ನಾನು ಭಾರತ ತಂಡದಲ್ಲೇ ಇರುತ್ತಿರಲಿಲ್ಲವೇನೋ?. ನಾನು ಅವರ ನಾಯಕತ್ವದಲ್ಲೇ ತಂಡದೊಳಗೆ ಬಂದೆ. ನಾನು ಅವರ ನಾಯಕತ್ವದಲ್ಲಿ ಸಾಕಷ್ಟು ಬಾರಿ ಕಮ್‌ಬ್ಯಾಕ್ ಮಾಡಿದ್ದೇನೆ ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.
ಕೊನೆಯ ಸರಣಿಯಲ್ಲೂ ಸಿಕ್ತು ಧೋನಿಯಿಂದ ಬೆಂಬಲ
ಇನ್ನು ಅಮಿತ್ ಮಿಶ್ರಾ ತಾವಾಡಿದ ಕೊನೆಯ ಏಕದಿನ ಸರಣಿಯಲ್ಲೂ ಧೋನಿಯಿಂದ ತಮಗೆ ಸಂಪೂರ್ಣ ಬೆಂಬಲ ಸಿಕ್ಕಿತ್ತು ಎಂದು ಹೇಳಿದ್ದಾರೆ. ಅವರ ಸಲಹೆಯಂತೆ ಬೌಲಿಂಗ್ ಮಾಡಿದ್ದಕ್ಕಾಗಿಯೇ ನನಗೆ ವಿಕೆಟ್ ಸಿಕ್ಕಿದವು. ಅವರು ಸಾಕಷ್ಟು ಬಾರಿ ನನ್ನನ್ನು ಬೆಂಬಲಿಸಿದರು ಹಾಗೂ ಸಾಕಷ್ಟು ಟಿಪ್ಸ್ ನೀಡಿದರು ಎಂದು ಅಮಿತ್ ಮಿಶ್ರಾ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ನಾವು ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯನ್ನು ಅಡುತ್ತಿದ್ದೆವು. ಅದು ನನ್ನ ಕೊನೆಯ ಏಕದಿನ ಸರಣಿ ಎನಿಸಿಕೊಂಡಿತ್ತು. ಆಗ ಎಂ ಎಸ್ ಧೋನಿ ನಮ್ಮ ತಂಡದ ನಾಯಕರಾಗಿದ್ದರು. ಅದು ಸಾಕಷ್ಟು ಸವಾಲಿನ ಪಂದ್ಯವಾಗಿತ್ತು. ನಾವು ಮ್ಯಾಚ್‌ನಲ್ಲಿ 260-270 ರನ್ ಗಳಿಸಿದ್ದೆವು. ನಾನು ಬೌಲಿಂಗ್‌ನಲ್ಲಿ ವಿಕೆಟ್ ಪಡೆಯುವ ಬದಲು ರನ್ ಗಳಿಸಲು ಸಾಧ್ಯವಾಗದಂತೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೆ. ಇದಾದ ನಂತರ ಧೋನಿ ಬಂದು ಕೆಲವು ಸಲಹೆ ನೀಡಿದರು. ಇದಾದ ಬಳಿಕ ನನಗೆ ವಿಕೆಟ್ ಸಿಕ್ಕಿದವು ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.


