ಬೆಂಗಳೂರು(ಮಾ.18): ಮಾರಕ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಭೀತಿಯಿಂದ ಬಿಸಿಸಿಐ ಎಲ್ಲಾ ಕ್ರಿಕೆಟ್‌ ಪಂದ್ಯಗಳನ್ನು ಮುಂದೂಡಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ ಇಲ್ಲಿನ ಆಲೂರು ಕ್ರಿಕೆಟ್‌ ಮೈದಾನದಲ್ಲಿ 4 ಡಿವಿಷನ್‌ ಲೀಗ್‌ ಪಂದ್ಯಗಳನ್ನು ನಡೆಸಿ ವಿವಾದಕ್ಕೆ ಸಿಲುಕಿದೆ. 

ತೀವ್ರ ಸ್ವರೂಪದ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ..!

ಈ ಪಂದ್ಯಗಳಲ್ಲಿ ಕರ್ನಾಟಕ ರಣಜಿ ಹಾಗೂ ಸೀಮಿತ ಓವರ್‌ ತಂಡಗಳ ಆಟಗಾರರಾದ ಕೆ.ಗೌತಮ್‌, ಆರ್‌.ಸಮರ್ಥ್, ಅನಿರುದ್ಧ್ ಜೋಶಿ, ಕೆ.ವಿ.ಸಿದ್ಧಾರ್ಥ್, ಕೌನೇನ್‌ ಅಬ್ಬಾಸ್‌, ಕೆ.ಸಿ.ಕಾರ್ಯಪ್ಪ, ಲುವ್ನಿತ್‌ ಸಿಸೋಡಿಯಾ, ಡಿ.ನಿಶ್ಚಲ್‌ ಪಾಲ್ಗೊಂಡಿದ್ದರು. ಬ್ಯಾಂಕ್‌ ಆಫ್‌ ಬರೋಡಾ, ಇಂಡಿಯನ್‌ ಏರ್‌ ಫೋರ್ಸ್‌, ಕೆನರಾ ಬ್ಯಾಂಕ್‌, ಎಜಿಒ ರಿಕ್ರಿಯೇಷನ್‌ ಕ್ಲಬ್‌, ರಿಸರ್ವ್ ಬ್ಯಾಂಕ್‌ ರಿಕ್ರಿಯೇಷನ್‌ ಕ್ಲಬ್‌, ಎಸ್‌ಬಿಐ, ಪ್ರೈಮ್‌ ಫೋಕಸ್‌ ಟೆಕ್ನಾಲಜಿಸ್‌ ಹಾಗೂ ಕಸ್ಟಮ್ಸ್‌-ಸೆಂಟ್ರಲ್‌ ಎಕ್ಸೈಸ್‌ ಕ್ಲಬ್‌ ತಂಡಗಳು ಸ್ಪರ್ಧಿಸಿದವು. ಪಂದ್ಯಗಳು ನಡೆದ ಬಗ್ಗೆ ಕೆಎಸ್‌ಸಿಎ ಸಿಬ್ಬಂದಿ ಗೊಂದಲಮಯ ಹೇಳಿಕೆಗಳನ್ನು ನೀಡಿದರೂ, ಪಂದ್ಯದಲ್ಲಿ ಆಡಿದ ಕರ್ನಾಟಕದ ಆಟಗಾರರೊಬ್ಬರು ಮಂಗಳವಾರವೇ ಪಂದ್ಯ ನಡೆಯಿತು ಎಂದು ‘ಕನ್ನಡಪ್ರಭ’ಕ್ಕೆ ಖಚಿತ ಪಡಿಸಿದರು.

ಕೊರೋನಾ ಎಫೆಕ್ಟ್: ಪಾಕಿಸ್ತಾನ ಸೂಪರ್ ಲೀಗ್ ಸೆಮೀಸ್ ರದ್ದು..!

ಈ ಬಗ್ಗೆ ಪತ್ರಿಕೆ ಕೆಎಸ್‌ಸಿಎ ಖಜಾಂಚಿ ಹಾಗೂ ವಕ್ತಾರ ವಿನಯ್‌ ಮೃತ್ಯುಂಜಯ ಅವರನ್ನು ಸಂಪರ್ಕಿಸಿದಾಗ, ‘ಒಂದು ದಿನದ ಮಟ್ಟಿಗೆ ಪಂದ್ಯಗಳನ್ನು ನಡೆಸಲಾಗಿದೆ. ಆದರೆ ಮುಂದಿನ ಆದೇಶದ ವರೆಗೂ ಎಲ್ಲಾ ಟೂರ್ನಿಗಳನ್ನು ಮುಂದೂಡಿದ್ದೇವೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ’ ಎಂದರು.