ಕಾಂಗರೂ ಬೇಟೆಯಾಡಿದ ರಹಾನೆ ಪಡೆಗೆ ಅದ್ಧೂರಿ ಸ್ವಾಗತ..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಜಯಿಸಿದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆಗೆ ಮುಂಬೈನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ, ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಜ.21): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾಗೆ ತವರಿಗೆ ಬಂದಿಳಿಯುತ್ತಿದ್ದಂತೆ ಭರ್ಜರಿ ಸ್ವಾಗತ ಸಿಕ್ಕಿದೆ. ನಾಯಕ ಅಜಿಂಕ್ಯ ರಹಾನೆ, ಉಪನಾಯಕ ರೋಹಿತ್ ಶರ್ಮಾ ಹಾಗೂ ಮುಂಬೈ ಮೂಲದ ಮತ್ತೆ ಮೂವರು ಆಟಗಾರರಿಗೆ ಒಂದು ವಾರಗಳ ಕಾಲ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ.
ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಅವರದ್ದೇ ನೆಲದಲ್ಲಿ ಸತತ ಎರಡನೇ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮಾತ್ರವಲ್ಲದೇ ಕೋಚ್ ರವಿಶಾಸ್ತ್ರಿ, ಶಾರ್ದೂಲ್ ಠಾಕೂರ್ ಹಾಗೂ ಪೃಥ್ವಿ ಶಾ ಕೂಡಾ ಮುಂಬೈಗೆ ಬಂದಿಳಿದಿದ್ದು ಎಲ್ಲರಿಗೂ ಒಂದು ವಾರಗಳ ಕಾಲ ಕ್ವಾರಂಟೈನ್ ವಿಧಿಸಲಾಗಿತ್ತು.
ಬೃಹನ್ಮುಂಬೈ ಮಹಾನಗರ ಪಾಲಿಕೆಯ ಕಮಿಷನರ್ ಇಕ್ಬಾಲ್ ಸಿಂಗ್ ಚಹಲ್ ಈ ವಿಚಾರವನ್ನು ಖಚಿತಪಡಿಸಿದ್ದು, ಎಲ್ಲಾ ಟೀಂ ಇಂಡಿಯಾ ಆಟಗಾರರು ಬಯೋ ಬಬಲ್‌ನಲ್ಲಿದ್ದು, ನೇರವಾಗಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ಆ ಎಲ್ಲಾ ಆಟಗಾರರಿಗೆ 7 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ತವರಿಗೆ ಆಗಮಿಸಿ ನೇರವಾಗಿ ತಂದೆ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಸಿರಾಜ್!
ಅಜಿಂಕ್ಯ ರಹಾನೆ ತವರಿಗೆ ಬಂದಿಳಿಯುತ್ತಿದ್ದಂತೆ ಮುಂಬೈ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಆಸೀಸ್ ನೆಲದಲ್ಲಿ ಭಾರತವನ್ನು ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಕ್ಕೆ ರಹಾನೆ ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಿಸಲಾಯಿತು.
ಮುಂಬೈ ನಗರದಲ್ಲಿ ನಾಯಕ ಅಜಿಂಕ್ಯ ರಹಾನೆಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಕ್ರಿಕೆಟ್ ಅಭಿಮಾನಿಗಳು ರೆಡ್ ಕಾರ್ಪೆಟ್ ಹಾಸಿ, ಡೋಲು ಬಡಿಯುತ್ತಾ, ಕಹಳೆ ಊದುತ್ತಾ, ರಹಾನೆ ಮೇಲೆ ಹೂ ಮಳೆ ಸುರಿಸುತ್ತಾ ಅದ್ಧೂರಿ ಸ್ವಾಗತ ನೀಡಲಾಯಿತು.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತ್ತು. ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ 32 ವರ್ಷಗಳಿಂದ ಸೋಲಿನ ಕಹಿಯುಂಡಿರಲಿಲ್ಲ. ಆದರೆ ಈ ಬಾರಿ ಟೀಂ ಇಂಡಿಯಾ ಟಿಮ್ ಪೈನ್ ನೇತೃತ್ವದ ಆಸೀಸ್‌ಗೆ 3 ವಿಕೆಟ್‌ಗಳ ಸೋಲುಣಿಸುವ ಮೂಲಕ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿತ್ತು.