ಅಹಮದಾಬಾದ್‌ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ ಆಕರ್ಷಕ ಶತಕಚಹಾ ವಿರಾಮದ ವೇಳೆಗೆ 2 ವಿಕೆಟ್‌ ಕಳೆದುಕೊಂಡು 188 ರನ್ ಗಳಿಸಿದ ಭಾರತಇನ್ನೂ 292 ರನ್‌ಗಳ ಹಿನ್ನಡೆಯಲ್ಲಿರುವ ಟೀಂ ಇಂಡಿಯಾ

ಅಹಮದಾಬಾದ್‌(ಮಾ.11): ಆರಂಭಿಕ ಬ್ಯಾಟರ್‌ ಶುಭ್‌ಮನ್‌ ಗಿಲ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ, ಅಹಮದಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 188 ರನ್‌ ಬಾರಿಸಿದ್ದು, ಇನ್ನು 292 ರನ್‌ಗಳ ಹಿನ್ನಡೆಯಲ್ಲಿದೆ. ಗಿಲ್‌ 103 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಮೂರನೇ ದಿನದಾಟದಲ್ಲಿ ಆಸೀಸ್ ಎದುರು ಟೀಂ ಇಂಡಿಯಾ ದಿಟ್ಟ ಪ್ರತಿರೋಧವನ್ನು ತೋರಿದೆ. ಮೂರನೇ ದಿನದಾಟದ ಮೊದಲ ಸೆಷನ್‌ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 129 ರನ್‌ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ಸೆಷನ್‌ನಲ್ಲಿ ಕೊಂಚ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಎರಡನೇ ಸೆಷನ್‌ನಲ್ಲಿ ಭಾರತ ಕೇವಲ 57 ರನ್ ಕಲೆಹಾಕಿತು. ಚಹಾ ವಿರಾಮಕ್ಕೆ ಇನ್ನೊಂದು ಓವರ್ ಇದ್ದಾಗ ಚೇತೇಶ್ವರ್ ಪೂಜಾರ ವಿಕೆಟ್ ಕಬಳಿಸುವಲ್ಲಿ ಟೋಡ್‌ ಮರ್ಫಿಗೆ ವಿಕೆಟ್‌ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಚೇತೇಶ್ವರ್ ಪೂಜಾರ ಹಾಗೂ ಶುಭ್‌ಮನ್‌ ಗಿಲ್‌ ಜೋಡಿ 248 ಎಸೆತಗಳನ್ನು ಎದುರಿಸಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Scroll to load tweet…

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000 ರನ್ ಬಾರಿಸಿದ ರೋಹಿತ್ ಶರ್ಮಾ; ಟೀಂ ಇಂಡಿಯಾ ದಿಗ್ಗಜರ ಸಾಲಿಗೆ ಸೇರ್ಪಡೆ..!

ಶುಭ್‌ಮನ್ ಗಿಲ್ ಆಕರ್ಷಕ ಶತಕ: ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶುಭ್‌ಮನ್ ಗಿಲ್, ಇದೀಗ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಿನದಾಟದ ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗಿಲ್, ಆ ಬಳಿಕ ಕೊಂಚ ಎಚ್ಚರಿಯ ಆಟಕ್ಕೆ ಮೊರೆ ಹೋದರು. ಶುಭ್‌ಮನ್ ಗಿಲ್ 194 ಎಸೆತಗಳನ್ನು ಎದುರಿಸಿ ಟೆಸ್ಟ್‌ ಕ್ರಿಕೆಟ್‌ ವೃತ್ತಿಜೀವನದ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ಸದ್ಯ ಗಿಲ್‌ 197 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 103 ರನ್ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಇನ್ನೂ ಖಾತೆ ತೆರೆಯದೇ ಕ್ರೀಸ್ ಕಾಯ್ದುಕೊಂಡಿದ್ದಾರೆ.