ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆಕರ್ಷಕ ಫಿಫ್ಟಿಕಾಂಗರೂ ಪಡೆಗೆ ದಿಟ್ಟ ತಿರುಗೇಟು ನೀಡುವತ್ತ ಟೀಂ ಇಂಡಿಯಾ ಹೆಜ್ಜೆಇನ್ನು 351 ರನ್‌ಗಳ ಹಿನ್ನಡೆಯಲ್ಲಿರುವ ರೋಹಿತ್ ಶರ್ಮಾ ಪಡೆ
ಅಹಮದಾಬಾದ್(ಮಾ.11): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ದಿಟ್ಟ ಆರಂಭವನ್ನೇ ಪಡೆದಿದೆ. ಪ್ರವಾಸಿ ಆಸ್ಟ್ರೇಲಿಯಾವನ್ನು ಮೊದಲ ಇನಿಂಗ್ಸ್‌ನಲ್ಲಿ 480 ರನ್‌ಗಳಿಗೆ ನಿಯಂತ್ರಿಸಿ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 129 ರನ್ ಬಾರಿಸಿದ್ದು, ಇನ್ನು 351 ರನ್‌ಗಳ ಹಿನ್ನಡೆಯಲ್ಲಿದೆ. ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ ಉತ್ತಮ ಸಾಥ್ ನೀಡಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 36 ರನ್‌ಗಳಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟವನ್ನು ಭರ್ಜರಿಯಾಗಿಯೇ ಆರಂಭಿಸಿತು. ಮೊದಲ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ 20.6 ಓವರ್‌ಗಳಲ್ಲಿ 74 ರನ್‌ಗಳ ಜತೆಯಾಟವಾಡುವ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ರೋಹಿತ್ ಶರ್ಮಾ 58 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಬಾರಿಸಿ ಮ್ಯಾಥ್ಯೂ ಕುಹ್ನೇಮನ್ ಬೌಲಿಂಗ್‌ನಲ್ಲಿ ಮಾರ್ನಸ್ ಲಬುಶೇನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಗಿಲ್-ಪೂಜಾರ ಜುಗಲ್ಬಂದಿ: ರೋಹಿತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಜತೆ ಶುಭ್‌ಮನ್ ಗಿಲ್ ಚುರುಕಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಇನ್ನು ಪೂಜಾರ ಕೂಡಾ ಆರಂಭದಿಂದಲೇ ರನ್ ಬಾರಿಸುವ ಯತ್ನ ಶುರುಮಾಡಿದ್ದಾರೆ. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 97 ಎಸೆತಗಳನ್ನು ಎದುರಿಸಿ ಮುರಿಯದ 55 ರನ್‌ಗಳ ಜತೆಯಾಟ ನಿಭಾಯಿಸಿದೆ. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಜವಾಬ್ದಾರಿ ಆಟವಾಡುತ್ತಿರುವ ಶುಭ್‌ಮನ್ ಗಿಲ್ 119 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 65 ರನ್ ಬಾರಿಸಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಶುಭ್‌ಮನ್ ಗಿಲ್‌ಗೆ ಉತ್ತಮ ಸಾಥ್ ನೀಡಿರುವ ಚೇತೇಶ್ವರ್ ಪೂಜಾರ ಕೇವಲ 46 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 22 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
Ahmedabad Test ಆಸೀಸ್ ಆಲೌಟ್ ಮಾಡಿದ ಟೀಂ ಇಂಡಿಯಾ ಎಚ್ಚರಿಕೆಯ ಆರಂಭ..!
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡವು ಉಸ್ಮಾನ್ ಖವಾಜ ಹಾಗೂ ಕ್ಯಾಮರೋನ್ ಗ್ರೀನ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಬಾರಿಸಿ ಸರ್ವಪತನ ಕಂಡಿತು. ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ 180 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕ್ಯಾಮರೋನ್ ಗ್ರೀನ್ 114 ರನ್ ಸಿಡಿಸಿದರು. ಇನ್ನು ಟೀಂ ಇಂಡಿಯಾ ಪರ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಕಬಳಿಸಿ ಮಿಂಚಿದರು.
