ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಮಹಿಳಾ ಅಂಡರ್‌-15 ಏಕದಿನ ಟೂರ್ನಿಗೆ ಕ್ಷಣಗಣನೆಕರ್ನಾಟಕದ 14 ಮಂದಿ ಆಟಗಾರ್ತಿಯರು ವಯೋಮಿತಿ ಪರೀಕ್ಷೆಯಲ್ಲಿ ವಿಫಲಟೂರ್ನಿ ಡಿಸೆಂಬರ್ 26ಕ್ಕೆ ಆರಂಭ

ಬೆಂಗಳೂರು(ಡಿ.22): ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಮಹಿಳಾ ಅಂಡರ್‌-15 ಏಕದಿನ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಕರ್ನಾಟಕದ 14 ಮಂದಿ ಆಟಗಾರ್ತಿಯರು ವಯೋಮಿತಿ ಪರೀಕ್ಷೆಯಲ್ಲಿ ವಿಫಲಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಅಕ್ಟೋಬರ್‌ನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) 10 ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ, 25 ಮಂದಿಯನ್ನು ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿತ್ತು. 

ಇತ್ತೀಚೆಗೆ ಬಿಸಿಸಿಐ ವಯಸ್ಸು ಪತ್ತೆಗಾಗಿ ನಡೆಸಿದ ಮೂಳೆ ಪರೀಕ್ಷೆಯಲ್ಲಿ ಅವರು ಪಾಲ್ಗೊಂಡಿದ್ದು, 11 ಮಂದಿ ಮಾತ್ರ ಪಾಸಾಗಿದ್ದಾರೆ. ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ‘ಕರ್ನಾಟಕ ಮಾತ್ರವಲ್ಲದೇ ಇತರೆ ರಾಜ್ಯಗಳ ಕೆಲ ಆಟಗಾರ್ತಿಯರೂ ಪರೀಕ್ಷೆಯಲ್ಲಿ ವಿಫಲಗೊಂಡಿದ್ದಾರೆ. ನಮ್ಮ ತಂಡಕ್ಕೆ 14 ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಯಾವುದೇ ಗೊಂದಲಗಳಿಲ್ಲದೇ ಟೂರ್ನಿಯಲ್ಲಿ ಆಡಲಿದ್ದಾರೆ’ ಎಂದು ತಿಳಿಸಿದ್ದಾರೆ. ಟೂರ್ನಿ ಡಿಸೆಂಬರ್ 26ಕ್ಕೆ ಆರಂಭಗೊಳ್ಳಲಿದೆ.

ಭಾರತ ವಿರುದ್ದ ಟೀಕೆ ಮಾಡುತ್ತಿದ್ದರಿಂದಲೇ ಪಿಸಿಬಿ ಅಧ್ಯಕ್ಷ ಸ್ಥಾನದಿಂದ ರಮೀಜ್‌ ರಾಜಾ ವಜಾ?

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಮಾಜಿ ಕ್ರಿಕೆಟಿಗ ರಮೀಜ್‌ ರಾಜಾ ಅವರನ್ನು ವಜಾ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪಾಕಿಸ್ತಾನ ತಂಡ ಸತತ ಸೋಲು ಕಾಣುತ್ತಿರುವ ಹಿನ್ನಲೆಯಲ್ಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಬಿಸಿಸಿಐ ವಿರುದ್ಧ ನಿರಂತರ ಟೀಕೆ ನಡೆಸುತ್ತಿದ್ದ ಕಾರಣದಿಂದಲೇ ಅವರು ಹುದ್ದೆ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ. 

2013-14ರ ಅವಧಿಯಲ್ಲಿ ಪಿಸಿಬಿ ಮುಖ್ಯಸ್ಥರಾಗಿ ಕಾರ‍್ಯನಿರ್ವಹಿಸಿದ್ದ ನಜಂ ಸೇಠಿ ಮತ್ತೆ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ 2023ರ ಏಷ್ಯಾಕಪ್‌ ಟೂರ್ನಿಯನ್ನು ಪಾಕಿಸ್ತಾನದಿಂದ ಸ್ಥಳಾಂತರ ಮಾಡಲು ಸಲೀಸಾಗಲಿದ್ದು, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಬಹಿಷ್ಕಾರ ಹಾಕುವ ಪಿಸಿಬಿ ಚಿಂತನೆಯೂ ಕೊನೆಗೊಳ್ಳಲಿದೆ ಎನ್ನಲಾಗಿದೆ.

ಟೆಸ್ಟ್‌ ರ‍್ಯಾಂಕಿಂಗ್‌‌: ಅಕ್ಷರ್‌, ಕುಲ್ದೀಪ್‌ ಭಾರೀ ಜಿಗಿತ

ದುಬೈ: ಭಾರತದ ಆಲ್ರೌಂಡರ್‌ ಅಕ್ಷರ್‌ ಪಟೇಲ್‌ ಐಸಿಸಿ ಟೆಸ್ಟ್‌ ಬೌಲಿಂಗ್‌ ರ‍್ಯಾಂಕಿಂಗ್‌‌ನಲ್ಲಿ ಜೀವನಶ್ರೇಷ್ಠ 18ನೇ ಸ್ಥಾನಕ್ಕೇರಿದ್ದು, ಕುಲ್ದೀಪ್‌ ಯಾದವ್‌ 49ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬುಧವಾರ ಪ್ರಕಟಗೊಂಡ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಅಕ್ಷರ್‌ 20 ಸ್ಥಾನ ಮೇಲೇರಿದರೆ, ಕುಲ್ದೀಪ್‌ ಯಾದವ್ 19 ಸ್ಥಾನ ಜಿಗಿತ ಕಂಡರು. ಜಸ್ಪ್ರೀತ್ ಬುಮ್ರಾ, ಆರ್‌.ಅಶ್ವಿನ್‌ ಕ್ರಮವಾಗಿ 4, 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 

ಬ್ಯಾಟಿಂಗ್‌ ರ‍್ಯಾಂಕಿಂಗ್‌‌ನಲ್ಲಿ ಚೇತೇಶ್ವರ್ ಪೂಜಾರ ಹಾಗೂ ಶುಭ್‌ಮನ್‌ ಗಿಲ್‌ ತಲಾ 10 ಸ್ಥಾನ ಪ್ರಗತಿ ಸಾಧಿಸಿದ್ದು, ಕ್ರಮವಾಗಿ 16, 54ನೇ ಸ್ಥಾನ ಪಡೆದುಕೊಂಡಿದ್ದಾರೆ. 5ನೇ ಸ್ಥಾನದಲ್ಲಿರುವ ರಿಷಭ್‌ ಪಂತ್‌ ಅಗ್ರ ಶ್ರೇಯಾಂಕಿತ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ರೋಹಿತ್‌ ಶರ್ಮಾ 9, ವಿರಾಟ್ ಕೊಹ್ಲಿ 12ನೇ ಸ್ಥಾನದಲ್ಲಿದ್ದಾರೆ.