ಐಪಿಎಲ್ ಚಾಂಪಿಯನ್ ಆದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದಿಂದಾಗಿ, ಸ್ಟೇಡಿಯಂನಲ್ಲಿ ಪಂದ್ಯಗಳ ಆಯೋಜನೆಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನವನ್ನು ಬದಲಿಸುವ ಸಾಧ್ಯತೆಯಿದೆ.
ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಬರೋಬ್ಬರಿ 18 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಇದರ ಮರು ದಿನವೇ ಬೆಂಗಳೂರಿನ ಫ್ಯಾನ್ಸ್ ಜತೆ ಸಂಭ್ರಮಾಚರಣೆ ಮಾಡಲು ಮುಂದಾದ ಆರ್‌ಸಿಬಿಗೆ ಬಿಗ್ ಶಾಕ್ ಎದುರಾಗಿತ್ತು.
ಚಾಂಪಿಯನ್ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಈ ವೇಳೆ ಸಂಭವಿಸಿದ ಆಕಸ್ಮಿಕ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಬಿಸಿಸಿಐ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ದೊಡ್ಡ ಟೂರ್ನಿ ಆಯೋಜನೆಗೆ ಅವಕಾಶ ನೀಡುತ್ತಿಲ್ಲ. ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಚಿನ್ನಸ್ವಾಮಿ ಸ್ಟೇಡಿಯಂನಿಂದ ಎತ್ತಂಗಡಿಯಾಗಿತ್ತು. ಇನ್ನು ಕೆಲವು ಮಾಧ್ಯಮ ವರದಿಗಳ ಪ್ರಕಾರ, ಇನ್ನು ಮುಂದೆ ಕೆಲಕಾಲ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಾಟಗಳು ನಡೆಯುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಚಾಂಪಿಯನ್ ಆದ ಬೆನ್ನಲ್ಲೇ ಆರ್‌ಸಿಬಿ ಫ್ರಾಂಚೈಸಿಯು ತನ್ನ ತವರು ಮೈದಾನವನ್ನು ಬೇರೆ ಕಡೆ ಬದಲಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆರ್‌ಸಿಬಿಗೆ ಈ ಸ್ಟೇಡಿಯಂನಿಂದ ಸಿಕ್ತು ಓಪನ್ ಆಫರ್:
ಎಂ ಚಿನ್ನಸ್ವಾಮಿ ಸ್ಟೇಡಿಯಂ ವಿವಾದದ ಬೆನ್ನಲ್ಲೇ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಓಪನ್ ಆಫರ್ ನೀಡಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಪುಣೆಯಲ್ಲಿರುವ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಅನ್ನು ತಮ್ಮ ಹೋಮ್ ಗ್ರೌಂಡ್ ಮಾಡಿಕೊಳ್ಳಲು ಆಫರ್ ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಆರ್‌ಸಿಬಿ ಹಾಗೂ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಈ ಮಾತಿಗೆ ಪುಷ್ಠಿ ನೀಡುವಂತೆ ಎಂಸಿಎಯ ಕಮಲೇಶ್ ಫಿಸಲ್, 'ಇಲ್ಲಿ ಆರ್‌ಸಿಬಿ ಆತಿಥ್ಯ ವಹಿಸುವ ವಿಚಾರ ಚರ್ಚೆಯಲ್ಲಿದೆ. ಆದರೆ ಇಲ್ಲೇ ಆರ್‌ಸಿಬಿ ತವರು ಮೈದಾನವಾಗಿಸಿಕೊಳ್ಳಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಕರ್ನಾಟಕದಲ್ಲಿ ಆದಂತಹ ದುರ್ಘಟನೆಯಿಂದ ಅಲ್ಲಿ ಟೂರ್ನಿ ನಡೆಸಲು ಕಷ್ಟವಾಗಿದೆ. ಹೀಗಾಗಿ ಅವರು ಹೊಸ ಹೋಮ್ ಗ್ರೌಂಡ್ ಹುಡುಕುತ್ತಿದ್ದಾರೆ. ನಾವು ನಮ್ಮ ಸ್ಟೇಡಿಯಂ ನೀಡಲು ಸಿದ್ದವಿದ್ದೇವೆ. ಈಗಿನ್ನೂ ಮಾತುಕತೆ ಆರಂಭಿಕ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಮಾತುಕತೆ ಸಾಗಿದರೆ ಪುಣೆ, ಈ ಬಾರಿ ಆರ್‌ಸಿಬಿಯ ತವರು ಮೈದಾನವಾಗಿ ಐಪಿಎಲ್‌ಗೆ ಆತಿಥ್ಯ ವಹಿಸಲಿದೆ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಮ್ಯಾಚ್ ಶಿಫ್ಟ್ ಆದ್ರೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಂ ಚಿನ್ನಸ್ವಾಮಿ ಸ್ಟೇಡಿಯಂ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಇಲ್ಲಿನ ಅಭಿಮಾನಿಗಳು ಕೂಡಾ ಆರ್‌ಸಿಬಿ ತಂಡವನ್ನು ಬೆಂಬಲಿಸಿಕೊಂಡೇ ಬಂದಿದ್ದಾರೆ. ಆದರೆ ಒಂದು ವೇಳೆ ಬೆಂಗಳೂರಿನಿಂದ ಆರ್‌ಸಿಬಿ ಪಂದ್ಯಗಳು ಶಿಫ್ಟ್ ಆದರೆ ಮುಂದೇನು ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಯಾವುದೇ ಉತ್ತರವಿಲ್ಲ
