ಭುವನೇಶ್ವರ್ ಕುಮಾರ್ 1425 ದಿನಗಳ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಇದೇ ವೇಳೆ ವಿಶ್ವಕಪ್ ಗೆಲ್ಲಲು ವಯಸ್ಸನ್ನು ಲೆಕ್ಕಿಸದೆ ಕೃನಾಲ್ ಪಾಂಡ್ಯ ಅವರನ್ನು ತಂಡಕ್ಕೆ ಕರೆತರುವಂತೆ ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್‌ ಭುವನೇಶ್ವರ್ ಕುಮಾರ್, ವೆಸ್ಟ್ ಇಂಡೀಸ್ ಎದುರಿನ ಐದನೇ ಟಿ20 ಪಂದ್ಯದಲ್ಲಿ ಭಾರತ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಮೊಹಮ್ಮದ್ ಶಮಿ ಕಮ್‌ಬ್ಯಾಕ್ ಮಾಡಲಿ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಅಂದಹಾಗೆ ಭುವನೇಶ್ವರ್ ಕುಮಾರ್ ಬರೋಬ್ಬರಿ 1425 ದಿನಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಕಳೆದೆರಡು ಸೀಸನ್‌ನಲ್ಲಿ ಆರ್‌ಸಿಬಿ ಪರ ಭುವಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಕೊನೆಗೂ ಬಿಸಿಸಿಐ ಆಯ್ಕೆಸಮಿತಿ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಭುವಿ ಕಮ್‌ಬ್ಯಾಕ್ ಹಿರಿಯ ಆಟಗಾರರನ್ನು ಆಯ್ಕೆ ಸಮಿತಿಯು ಟೀಂ ಇಂಡಿಯಾ ಸೆಲೆಕ್ಷನ್‌ಗೆ ಪರಿಗಣಿಸಲಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಆದರೆ ಇದೀಗ ಕಿವೀಸ್ ಎದುರಿನ ಏಕದಿನ ಸರಣಿಗೆ ಮತ್ತೋರ್ವ ಅನುಭವಿ ವೇಗಿ ಮೊಹಮ್ಮದ್ ಶಮಿ ಕಮ್‌ಬ್ಯಾಕ್ ಮಾಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಆರ್‌ಸಿಬಿಯ ಮತ್ತೋರ್ವ ಆಟಗಾರನ ಪರ ಬ್ಯಾಟ್ ಬೀಸಿದ್ದಾರೆ.

ಕೃನಾಲ್ ಪಾಂಡ್ಯ ಕರೆತನ್ನಿ ಎಂದ ಸನ್ನಿ:

ಇನ್ನು ಭುವನೇಶ್ವರ್ ಕುಮಾರ್ ಅವರಂತೆಯೇ ಆರ್‌ಸಿಬಿ ತಂಡವು ಚಾಂಪಿಯನ್ ಆಗುವಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೂಡಾ ಪ್ರಮುಖ ಪಾತ್ರ ವಹಿಸಿದ್ದರು. 2026ರ ಐಪಿಎಲ್ ಟೂರ್ನಿಯಲ್ಲಿ ಕೃನಾಲ್ ಪಾಂಡ್ಯ ಆರ್‌ಸಿಬಿ ಪರ 16 ಪಂದ್ಯಗಳನ್ನಾಡಿ 14 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಇದಷ್ಟೇ ಅಲ್ಲದೇ 226 ರನ್ ಸಿಡಿಸಿದ್ದರು.

ಹೀಗಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ಕೃನಾಲ್ ಪಾಂಡ್ಯ ಅವರನ್ನು ಟೀಂ ಇಂಡಿಯಾಗೆ ಕರೆತನ್ನಿ ಎಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾತ್ರವಲ್ಲದೇ ಫೀಲ್ಡಿಂಗ್‌ನಲ್ಲಿಯೂ ಚುರುಕಾಗಿರುವ ಕೃನಾಲ್ ಪಾಂಡ್ಯ ಓರ್ವ ಅದ್ಭುತ ಕ್ರಿಕೆಟಿಗ. ನೀವು ವಿಶ್ವಕಪ್ ಗೆಲ್ಲಬೇಕು ಎಂದಿದ್ದರೇ, ಈ ಆಟಗಾರನಿಗೆ ಅವಕಾಶ ನೀಡಿ ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸುನಿಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.

ವಯಸ್ಸು ನೋಡಬೇಡಿ:

ನೀವು ವಿಶ್ವಕಪ್‌ ಗೆಲ್ಲಬೇಕಿದ್ದರೇ, ಆಟಗಾರರ ವಯಸ್ಸು ನೋಡಬೇಡಿ. ಆಟಗಾರ ಐಪಿಎಲ್ ಆಡುತ್ತಿದ್ದು, ಆಡಲು ಫಿಟ್ ಆಗಿದ್ದರೇ, ದೇಶಿ ಕ್ರಿಕೆಟ್ ಆಡುತ್ತಿದ್ದರೇ ಅಂತಹ ಆಟಗಾರರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಕೃನಾಲ್ ಪಾಂಡ್ಯ 2021ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಕೃನಾಲ್ ಪಾಂಡ್ಯ ಮತ್ತೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಬೇಕೇ ಅಥವಾ ಬೇಡವೇ ಎನ್ನುವುದನ್ನು ಕಮೆಂಟ್ ಮಾಡಿದೆ.