ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನವು ಇಂಗ್ಲೆಂಡ್ ತಂಡವನ್ನು ಸೋಲಿಸಿತು, ಇದು ಇಂಗ್ಲೆಂಡ್‌ನ ನಿರ್ಗಮನಕ್ಕೆ ಕಾರಣವಾಯಿತು. ಇಬ್ರಾಹಿಂ ಜದ್ರಾನ್ ಅವರ ಶತಕ ಮತ್ತು ಅಜ್ಮತುಲ್ಲಾ ಓಮರ್‌ಝೈ ಅವರ ಆಲ್ರೌಂಡರ್ ಆಟವು ಅಫ್ಘಾನಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಲಾಹೋರ್‌ (ಫೆ.26): ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಂದಾಗಿದ್ದ ಇಂಗ್ಲೆಂಡ್‌ ತಂಡ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದಿದೆ. ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ 'ಟೀಮ್‌' ಫೈಟ್‌ಗೆ 8 ರನ್‌ಗಳಿಂದ ಮಂಡಿಯೂರಿದ ಇಂಗ್ಲೆಂಡ್‌ ಲೀಗ್‌ ಹಂತದಲ್ಲೇ ಟೂರ್ನಿಯಿಂದ ನಿರ್ಗಮನ ಕಂಡಿದೆ. ಈಗಾಗಲೇ ಆತಿಥೇಯ ರಾಷ್ಟ್ರ ಪಾಕಿಸ್ತಾನ ತಂಡ ಲೀಗ್‌ ಹಂತದಲ್ಲೇ ಹೊರಬಿದ್ದ ಆಘಾತ ಎದುರಿಸಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಅಫ್ಘಾನಿಸ್ತಾನ ಮತ್ತೊಂದು ಶಾಖ್‌ ನೀಡಿದೆ. ಕೆಲ ದಿನಗಳ ಹಿಂದೆ ಇದೇ ಮೈದಾನದಲ್ಲಿ 351 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್‌ ಈಗ ಅದೇ ಮೈದಾನದಲ್ಲಿ 326 ರನ್‌ಗಳನ್ನು ಚೇಸ್‌ ಮಾಡಲು ಒದ್ದಾಡಿತು. ಜೋ ರೂಟ್‌ ತಂಡಕ್ಕೆ ಶತಕದ ಕಾಣಿಕೆ ನೀಡಿದರೂ ಇಂಗ್ಲೆಂಡ್‌ ಗೆಲುವಿಗೆ ಇದು ಸಾಕಾಗಲಿಲ್ಲ.

37 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಅಫ್ಘಾನಿಸ್ತಾನ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತಕ್ಕೆ ಕಾರಣವಾಗಿದ್ದ ಇಬ್ರಾಹಿಂ ಜದ್ರಾನ್‌. 146 ಎಸೆತಗಳಲ್ಲಿ 177 ರನ್‌ಗಳ ಇನ್ನಿಂಗ್ಸ್‌ ಆಡಿದ ಜದ್ರಾನ್‌, ಐಸಿಸಿ ಏಕದಿನ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ ತಂಡದ ಎರಡನೇ ಗೆಲುವಿಗೆ ಕಾರಣರಾದರು. ಜದ್ರಾನ್‌ ಬಾರಿಸಿದ ರನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬ್ಯಾಟ್ಸ್‌ಮನ್‌ವೊಬ್ಬನ ಗರಿಷ್ಠ ರನ್‌ ಮಾತ್ರವಲ್ಲ, ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಬಾರಿಸಿದ ಗರಿಷ್ಠ ಮೊತ್ತವೂ ಆಗಿದೆ. ಜದ್ರಾನ್‌ರೊಂದಿಗೆ ಅಜ್ಮತುಲ್ಲಾ ಓಮರ್‌ಝೈ ಆಡಿದ ಆಲ್ರೌಂಡ್‌ ಆಟ ಕೂಡ ತಂಡದ ಗೆಲುವು ಕಾರಣವಾಯತು. 31 ಎಸೆತಗಳಲ್ಲಿ 41 ರನ್‌ ಬಾರಿಸಿ ಓಮರ್‌ಝೈ ಬಳಿಕ ಬೌಲಿಂಗ್‌ನಲ್ಲಿ 58 ರನ್‌ ನೀಡಿ 5 ವಿಕೆಟ್‌ ಉರುಳಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 7 ವಿಕೆಟ್‌ಗೆ 326 ರನ್‌ ಪೇರಿಸಿದರೆ, ಉತ್ತರವಾಗಿ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 317 ರನ್‌ಗೆ ಆಲೌಟ್‌ ಆಗಿ ಸೋಲು ಕಂಡಿತು. ಜೋ ರೂಟ್‌ ಬಾರಿಸಿದ 120 ರನ್‌ ಇಂಗ್ಲೆಂಡ್‌ ನೆರವಿಗೆ ಬರಲಿಲ್ಲ.

ಇಂಗ್ಲೆಂಡ್‌ನ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 30 ರನ್‌ಗಳಿಸುವಷ್ಟರಲ್ಲಿ ಫಿಲ್‌ ಸಾಲ್ಟ್ (12), ಜಾಮಿ ಸ್ಮಿತ್ (9) ವಿಕೆಟ್ ಕಳೆದುಕೊಂಡರು. ನಂತರ ಬೆನ್ ಡಕೆಟ್ (38) ರೂಟ್ ಜೋಡಿ 68 ರನ್ ಸೇರಿಸಿತು. ರಶೀದ್ ಖಾನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಅಫ್ಘಾನಿಸ್ತಾನಕ್ಕೆ ಬ್ರೇಕ್ ನೀಡಿದರು. ನಂತರ ಬಂದ ಹ್ಯಾರಿ ಬ್ರೂಕ್ (25), ಜೋಸ್ ಬಟ್ಲರ್ (38), ಲಿಯಾಮ್ ಲಿವಿಂಗ್‌ಸ್ಟೋನ್ (10) ಕಾಣಿಕೆ ತಂಡಕ್ಕೆ ಸಾಲಲಿಲ್ಲ. ಈ ಮಧ್ಯೆ ಜೋ ರೂಟ್ ಕೂಡಾ ಔಟಾದರು. ಇದರಿಂದ ಇಂಗ್ಲೆಂಡ್ 287 ರನ್‌ಗೆ 7 ವಿಕೆಟ್‌ ಕಳೆದುಕೊಂಡು ಗೆಲುವಿನ ಒದ್ದಾಟಕ್ಕೆ ಇಳಿದಿತ್ತು.111 ಎಸೆತಗಳನ್ನು ಎದುರಿಸಿದ ರೂಟ್ ಒಂದು ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಗಳಿಸಿದರು. 

ರೂಟ್ ಔಟಾದ ನಂತರ ಜಾಮಿ ಓವರ್‌ಟನ್ (32) ಜೋಫ್ರಾ ಆರ್ಚರ್ (14) ಜೋಡಿ ಅಫ್ಘಾನಿಸ್ತಾನಕ್ಕೆ ಆತಂಕ ಮೂಡಿಸಿತು. ಆದರೆ ಇಬ್ಬರೂ ಎರಡು ಓವರ್‌ಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡರು. ಇದರಿಂದ ಇಂಗ್ಲೆಂಡ್ 9 ವಿಕೆಟ್‌ಗೆ 313 ರನ್ ಪೇರಿಸಿತ್ತು. ಕೊನೆಯ ಓವರ್‌ನಲ್ಲಿ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಓಮರ್‌ಜೈ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಒಂದೊಂದು ರನ್‌ ಬಂದಿತು. ಕೊನೆಯ ಎರಡು ಎಸೆತಗಳಲ್ಲಿ ಗೆಲ್ಲಲು 9 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಆದಿಲ್ ರಶೀದ್ ಔಟಾಗಿದ್ದರಿಂದ ಅಫ್ಘಾನಿಸ್ತಾನ 8 ರನ್‌ ಗೆಲುವು ಕಂಡಿತು.

ಇದಕ್ಕೂ ಮುನ್ನ ಅಫ್ಘಾನಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಗಿತ್ತು. 37 ರನ್‌ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್ ಐದನೇ ಓವರ್‌ನ ಮೊದಲ ಎಸೆತದಲ್ಲಿ ಬೌಲ್ಡ್ ಆದರು. ಜೋಫ್ರಾ ಆರ್ಚರ್‌ಗೆ ಈ ವಿಕೆಟ್ ಲಭಿಸಿತು. ನಂತರ ಕ್ರೀಸ್‌ಗೆ ಬಂದ ಸೆದೀಖುಲ್ಲಾ ಅದಲಿನ್ (4) ಮಿಂಚಲಿಲ್ಲ. ಆರ್ಚರ್ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾದರು. ರಹಮತ್ ಶಾ (4) ಅವರನ್ನು ಔಟ್ ಮಾಡುವ ಮೂಲಕ ಆರ್ಚರ್ ಅಫ್ಘಾನಿಸ್ತಾನವನ್ನು ಆತಂಕಕ್ಕೆ ದೂಡಿದರು. ನಂತರ ಹಶ್ಮತುಲ್ಲಾ ಶಾಹಿದಿ (40) ಮತ್ತು ಜದ್ರಾನ್ ಜೋಡಿ 103 ರನ್ ಸೇರಿಸಿತು. ಈ ಜೋಡಿಯನ್ನು ಆದಿಲ್ ರಶೀದ್ ಬ್ರೇಕ್ ಮಾಡಿದರು.

ಪಾಕ್ ತಂಡಕ್ಕೆ ಧೋನಿ ನಾಯಕನಾದರೂ ಸಾಧ್ಯವಿಲ್ಲ: ಸನಾ ಮೀರ್ ಕಿಡಿ

ನಂತರ ಕ್ರೀಸ್‌ಗೆ ಬಂದ ಅಜ್ಮತುಲ್ಲಾ ಓಮರ್‌ಜೈ (41) ಜದ್ರಾನ್‌ಗೆ ಬೆಂಬಲ ನೀಡಿದರು. ಜದ್ರಾನ್‌ ಜೊತೆಗೂಡಿ ಅಜ್ಮತುಲ್ಲಾ 72 ರನ್ ಗಳಿಸಿದರು. ಜದ್ರಾನ್‌ ಇನ್ನಿಂಗ್ಸ್‌ನಲ್ಲಿ 146 ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು 12 ಬೌಂಡರಿಗಳು ಸೇರಿದ್ದವು. ಅಲ್ಲದೆ, ಸದ್ರನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲೆ ನಿರ್ಮಿಸಿದರು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಇವರದಾಗಿದೆ.

ಟೀಂ ಇಂಡಿಯಾ ಸೋಲಿಸಲು ಆರ್ಮಿ ಟ್ರೈನಿಂಗ್: ಬೆಟ್ಟ ಹತ್ತಿಸಿದ್ರು, ಗೋಡೆ ಹಾರಿಸಿದ್ರು, ಆದ್ರೂ ಪಾಕ್ ಗೆಲ್ಲಲಿಲ್ಲ