ಕಾಬೂಲ್(ಡಿ.22)‌: ಸ್ವದೇಶದ ಕ್ರಿಕೆಟ್‌ ಸರಣಿ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ನೆರೆ ರಾಷ್ಟ್ರವಾದ ಭಾರತದ ಮೊರೆ ಹೋಗುತ್ತಿದ್ದ ಆಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ (ಎಸಿಬಿ) ಶೀಘ್ರದಲ್ಲೇ ಸ್ವಂತದ ಕ್ರಿಕೆಟ್‌ ಕ್ರೀಡಾಂಗಣ ಹೊಂದಲಿದೆ. 

ಆಫ್ಘನ್‌ ಆತಿಥ್ಯ ವಹಿಸುವ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳು ಅಲ್ಲಿಯೇ ನಡೆಯಲಿವೆ. ರಾಜಧಾನಿ ಕಾಬೂಲ್‌ನ ಕೇಂದ್ರ ಭಾಗವಾಗಿರುವ ಅಲೋಕ್ಹೇಲ್‌ ಪ್ರದೇಶದಲ್ಲಿ ಅಧ್ಯಕ್ಷ ಮೊಹಮದ್‌ ಆಶ್ರಫ್‌ ಘನಿ, ಆಫ್ಘಾನಿಸ್ತಾನ ಕ್ರಿಕೆಟ್‌ ಸಂಸ್ಥೆ ವ್ಯಾಪ್ತಿಗೆ ಬರುವಂತೆ 2 ಎಕರೆಗಿಂತ ಹೆಚ್ಚಿನ ಭೂ ಪ್ರದೇಶವನ್ನು ಮಂಜೂರು ಮಾಡಿದ್ದಾರೆ.

ಈ ವೇಳೆ ಎಸಿಬಿ ಮುಖ್ಯಸ್ಥ ಪರ್ಹಾನ್‌ ಯುಸೂಫ್‌ಜಾಯಿ, ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಆಫ್ಘಾನಿಸ್ತಾನದಲ್ಲಿ ಪಂದ್ಯ ಮತ್ತು ಸರಣಿಗಳು ನಡೆಯಲಿವೆ. ಅಂತಾರಾಷ್ಟ್ರೀಯ ಆಟಗಾರರು ಸ್ವದೇಶದ ನೆಲದಲ್ಲಿ ಆಡುವುದನ್ನು ಆಫ್ಘಾನಿಸ್ತಾನದ ಜನರು ವೀಕ್ಷಿಸಲಿದ್ದಾರೆ ಎಂದು ಯುಸೂಫ್‌ಜಾಯಿ ಹೇಳಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ಹನುಮ ವಿಹಾರಿ ಬದಲಿಗೆ ಈ ಆಲ್ರೌಂಡರ್‌ಗೆ ಸ್ಥಾನ..?

ಆಫ್ಘನ್‌ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಚೊಚ್ಚಲ ಕ್ರಿಕೆಟ್‌ ಸ್ಟೇಡಿಯಂ ಪಂಚತಾರಾ ಸೌಲಭ್ಯಗಳ ಕೋಣೆಗಳು, ಈಜುಕೊಳ, ಅಭ್ಯಾಸಕ್ಕಾಗಿ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳು, ಪ್ರೇಕ್ಷಕರಿಗಾಗಿ ಟೆಂಟ್‌ಗಳು, ಆರೋಗ್ಯ ಕೇಂದ್ರ, ಮಸೀದಿ, ಕಾರ್‌ ಪಾರ್ಕಿಂಗ್‌ಗಾಗಿ ಸ್ಥಳಾವಕಾಶ, ಆಡಳಿತ ಕಚೇರಿ ಸೇರಿದಂತೆ ಇತರೆ ಸೌಲಭ್ಯಗಳು ದೊರೆಯಲಿವೆ. ಕ್ರೀಡಾಂಗಣದಲ್ಲಿ 35000 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಯುಸೂಫ್‌ಜಾಯಿ ಹೇಳಿದ್ದಾರೆ.