ಮಂಗ್ಳೂರು ಏರ್‌ಪೋರ್ಟಲ್ಲಿ ಇಟ್ಟದ್ದು ನಿಜವಾದ ಬಾಂಬ್!
ಮಂಗಳೂರು ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಮಂಗಳೂರು ಏರ್‌ಪೋರ್ಟ್ ಬಾಂಬ್ ಪ್ರಕರಣದ ತನಿಖೆ ನಡೆಸಿದ ಪೊಲೀಸರು 700 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಆಧಿತ್ಯ ರಾವ್ ನಿಜವಾದ ಬಾಂಬ್ ಇಟ್ಟಿದ್ದ ಎನ್ನುವುದನ್ನು ಉಲ್ಲೇಕಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮಂಗಳೂರು(ಜೂ.12): ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ಕ್ಕೆ ಬಾಂಬ್ ಪತ್ತೆಯಾದ ಪ್ರಕರಣ ಸಂಬಂಧ ಆರೋಪಿ ಆದಿತ್ಯ ರಾವ್ ವಿರುದ್ಧ ಸ್ಥಳೀಯ ಪೊಲೀಸರ ವಿಶೇಷ ತನಿಖಾ ತಂಡ ಗುರುವಾರ ಆರೋಪ ಪಟ್ಟಿಸಲ್ಲಿಸಿದೆ.
ಆರೋಪಿ ಇಟ್ಟಿದ್ದ ಬ್ಯಾಗ್‌ನಲ್ಲಿ ಇದ್ದುದು ನಿಜವಾದ ಸ್ಫೋಟಕಗಳೇ ಆಗಿದ್ದು, ಅದರಲ್ಲಿ ಅಮೋನಿಯಂ ನೈಟ್ರೇಟ್ ಇತ್ತು. ಅಲ್ಲದೆ, ಸ್ಫೋಟದ ತೀವ್ರತೆ ಹೆಚ್ಚಿಸಲು ಕಬ್ಬಿಣದ ಮೊಳೆಗಳನ್ನೂ ಅಳವಡಿಸಲಾಗಿತ್ತು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಅಮೋನಿಯಂ ನೈಟ್ರೇಟ್, ಬಾಂಬ್‌ನಲ್ಲಿ ಬಳಸುವ ರಾಸಾಯನಿಕ ಎಂಬುದು ಆಘಾತಕಾರಿ ಅಂಶ.
ಆರೋಪಿಯು ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಬಾಂಬ್ ಇಟ್ಟಿದ್ದ. ಉದ್ದೇಶಪೂರ್ವಕವಾಗಿಯೇ ಸ್ಫೋಟಕದಲ್ಲಿ ಒಂದು ವೈರ್ ಅನ್ನು ಸಂಪರ್ಕಿಸದೆ ಹಾಗೇ ಬಿಟ್ಟಿದ್ದ ಎನ್ನುವ ಅಂಶ ತನಿಖೆಯಿಂದ ಗೊತ್ತಾಗಿದೆ ಎಂದು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ 700 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
ಬಾಂಬರ್ ಆದಿತ್ಯ ರಾವ್‌ಗೆ ಮಂಪರು ಪರೀಕ್ಷೆ
ಯುಎಪಿಎ ಅಡಿ ಕೇಸ್: ಆರೋಪಿ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಏರ್‌ಪೋರ್ಟ್‌ನಲ್ಲಿ ಆರೋಪಿ ಇಟ್ಟಿದ್ದ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದು ನಿಜವಾದ ಸ್ಫೋಟಕವೇ ಆಗಿತ್ತು ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದಿಂದ ಸಾಬೀತಾಗಿದೆ. ಆರೋಪಿಯು ಸರ್ವಸಜ್ಜಿತ ಬಾಂಬನ್ನೇ ತಯಾರಿಸಿದ್ದ ಎನ್ನುವ ಸ್ಫೋಟಕ ಮಾಹಿತಿಯೂ ಚಾರ್ಜ್‌ಶೀಟ್‌ನಲ್ಲಿ ಇದೆ.
ಸ್ಟೀಲ್ ಬಾಕ್ಸ್‌ನಲ್ಲಿ ವ್ಯವಸ್ಥಿತವಾಗಿ ಸಲ್ಫರ್, ಅಮೋನಿಯಂ ನೈಟ್ರೇಟ್, ಪೊಟ್ಯಾಶಿಯಂ ಫ್ಲೋರೈಡ್, ಚಾರ್‌ಕೋಲ್ ಇಟ್ಟು ಅವುಗಳನ್ನು ವೈರ್‌ಗಳ ಮೂಲಕ ಜೋಡಿಸಿದ್ದ. ಬಾಂಬ್ ಅನ್ನು ಟೈಮರ್‌ಗೂ ಸಂಪರ್ಕಿಸಿದ್ದ. ಸ್ಫೋಟದ ತೀವ್ರತೆ ಹೆಚ್ಚಾಗಲಿ ಎನ್ನುವ ಕಾರಣಕ್ಕೆ ಕಬ್ಬಿಣದ ಮೊಳೆ, ಚೂಪಾದ ಲೋಹದ ವಸ್ತುಗಳನ್ನೂ ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ. ಆದರೆ, ಬಾಂಬ್ ಸ್ಫೋಟಿಸಲು ಅಗತ್ಯವಾಗಿದ್ದ ಒಂದು ಮುಖ್ಯ ವೈರ್ ಅನ್ನು ಮಾತ್ರ ಜೋಡಿಸದೆ ಹಾಗೇ ಬಿಟ್ಟಿದ್ದ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.