ICC T20 World Cup: ಇಂಡೋ-ಪಾಕ್ ಪಂದ್ಯದ ಹೆಚ್ಚುವರಿ ಟಿಕೆಟ್ಸ್ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್..!
* ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
* ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಸಂಗ್ರಾಮ
* ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯದ ಟಿಕೆಟ್‌ಗಳು ಸೋಲ್ಡೌಟ್
ಮೆಲ್ಬೊರ್ನ್(ಸೆ.15): ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳೆಂದೇ ಕರೆಯಲ್ಪಡುವ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಜರುಗಲಿದ್ದು, ಅಕ್ಟೋಬರ್ 23ರಂದು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯದ ಹೆಚ್ಚುವರಿ ಸ್ಟ್ಯಾಂಡಿಂಗ್ ರೂಂನ ಟಿಕೆಟ್‌ಗಳು ಕೂಡಾ ಕೆಲವೇ ಕ್ಷಣಗಳಲ್ಲಿ ಮಾರಟವಾಗಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸುಮಾರು 5,00,000(5 ಲಕ್ಷ)ಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಜಾಗತಿಕ ಕ್ರಿಕೆಟ್ ಮಂಡಳಿಯಾದ ಐಸಿಸಿ ತಿಳಿಸಿದೆ. ಇನ್ನೊಂದು ತಿಂಗಳಿನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ
2022ನೇ ಸಾಲಿನ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ ವಯೋಮಾನದ, ಎಲ್ಲಾ ವರ್ಗದ ಕ್ರಿಕೆಟ್ ಅಭಿಮಾನಿಗಳನ್ನು ನಾವು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ. ಇನ್ನೊಂದು ತಿಂಗಳಿನಲ್ಲಿ ಆರಂಭವಾಗಲಿರುವ ಜಾಗತಿಕ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ 5 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಟಿಕೆಟ್ ಕಾಯ್ದಿರಿಸುವ ಮೂಲಕ ಚುಟುಕು ಕ್ರಿಕೆಟ್ ಎಂಜಾಯ್ ಮಾಡಲು ರೆಡಿಯಾಗಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2020ರಲ್ಲಿ ನಡೆದ ಮಹಿಳಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಗೆ 100% ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ ನೀಡಲಾಗಿದೆ. 2020ರ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 86,174 ಮಂದಿ ಎಂಸಿಜಿ ಮೈದಾನಕ್ಕೆ ಬಂದು ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದರು. ಇದೀಗ ಪುರುಷ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, 82 ವಿವಿಧ ದೇಶಗಳ ಅಭಿಮಾನಿಗಳು ಜಗತ್ತಿನ ಅತಿದೊಡ್ಡ ಟಿ20 ಟೂರ್ನಿಯನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.
'ICC T20 World Cup ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ವಿದಾಯ ಘೋಷಿಸಬಹುದು..!'
ಇನ್ನು ಅಕ್ಟೋಬರ್ 23ರಂದು ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿವೆ. ಇನ್ನು ಸ್ಟ್ಯಾಂಡಿಂಗ್ ರೂಂನ ಹೆಚ್ಚುವರಿ ಟಿಕೆಟ್‌ಗಳು ಮಾರಾಟಕ್ಕೆ ಅನುವು ಮಾಡಿಕೊಟ್ಟ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಇನ್ನು ಈಗಾಗಲೇ ಟಿಕೆಟ್ ಖರೀದಿಸಿದವರು ತಮ್ಮ ಮೂಲ ಬೆಲೆಗೆ ಆ ಟಿಕೆಟ್‌ಗಳನ್ನು ಬದಲಾಯಿಸಿಕೊಳ್ಳಲು(ಎಕ್ಸ್‌ಚೇಂಜ್) ಫ್ಯಾನ್ಸ್‌ಗಳಿಗೆ ಅವಕಾಶ ನೀಡುವ ಬಗ್ಗೆ ಸದ್ಯದಲ್ಲಿಯೇ ಒಂದು ಫ್ಲಾಟ್‌ಫಾರ್ಮ್ ತೆರೆಯುವುದಾಗಿ ಐಸಿಸಿ ತಿಳಿಸಿದೆ.
ಇತ್ತೀಚೆಗಷ್ಟೇ ಯುಎಇನಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳೆಯಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನು ಸೂಪರ್ 4 ಹಂತದ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು, ಟೀಂ ಇಂಡಿಯಾಗೆ ಸೋಲುಣಿಸಿತ್ತು.