ಭಾರತದ ಕ್ರಿಕೆಟಿಗ ಅಭಿಷೇಕ್‌ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ತಮ್ಮ 9ನೇ ಶತಕವನ್ನು ಬಾರಿಸುವ ಮೂಲಕ, ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು 350 ಟಿ20 ಸಿಕ್ಸರ್‌ಗಳ ಮೈಲಿಗಲ್ಲನ್ನೂ ತಲುಪಿದ್ದು, ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಹೈದರಾಬಾದ್‌: ಭಾರತದ ತಾರಾ ಕ್ರಿಕೆಟಿಗ ಅಭಿಷೇಕ್‌ ಶರ್ಮಾ ಮತ್ತೊಮ್ಮೆ ಶತಕ ಬಾರಿಸಿದ್ದು, ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿಯ ಜೊತೆ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ತಲಾ 9 ಶತಕ ಸಿಡಿಸಿದ್ದಾರೆ.

ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ನ ಅಭಿಷೇಕ್‌ 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್‌ನೊಂದಿಗೆ ಔಟಾಗದೆ 135 ರನ್‌ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಯಾವುದೇ ಆಟಗಾರರ 5ನೇ ಗರಿಷ್ಠ ವೈಯಕ್ತಿಕ ಮೊತ್ತ. 2013ರಲ್ಲಿ ಪುಣೆ ವಿರುದ್ಧ ಬೆಂಗಳೂರಿನಲ್ಲಿ ಆರ್‌ಸಿಬಿಯ ಕ್ರಿಸ್‌ ಗೇಲ್‌ ಬಾರಿಸಿದ ಅಜೇಯ 175 ರನ್‌ ಈಗಲೂ ದಾಖಲೆ. ಕಳೆದ ವರ್ಷ ಪಂಜಾಬ್‌ ವಿರುದ್ಧ ಅಭಿಷೇಕ್‌ 141 ರನ್‌ ಸಿಡಿಸಿದ್ದರು. ಅದು 3ನೇ ಗರಿಷ್ಠ ಮೊತ್ತ.

9ನೇ ಸೆಂಚುರಿ:

ಈ ಶತಕದೊಂದಿಗೆ ಅಭಿಷೇಕ್‌ ಟಿ20 ಕ್ರಿಕೆಟ್‌ನ ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನಕ್ಕೇರಿದರು. ಕ್ರಿಸ್‌ ಗೇಲ್‌ 22 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಬಾಬರ್‌ ಆಜಂ 12, ಡೇವಿಡ್ ವಾರ್ನರ್‌ 10 ಶತಕ ಸಿಡಿಸಿದ್ದಾರೆ. ಕ್ವಿಂಟನ್‌ ಡಿ ಕಾಕ್‌, ವಿರಾಟ್‌, ರೀಲಿ ರೋಸೌ, ಸಾಹಿಬ್‌ಝಾದ ಫರ್ಹಾನ್‌ ಹಾಗೂ ಅಭಿಷೇಕ್‌ ತಲಾ 9 ಶತಕ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಅಭಿಷೇಕ್‌ 2, ವಿರಾಟ್‌ 8 ಶತಕ ಬಾರಿಸಿದ್ದಾರೆ.

ಟಿ20ಯಲ್ಲಿ ಅಭಿಷೇಕ್‌ ಶರ್ಮಾ 350 ಸಿಕ್ಸರ್‌

ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್‌ ಶರ್ಮಾ 350 ಸಿಕ್ಸರ್‌ಗಳ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಭಾರತ 6, ವಿಶ್ವದ 44ನೇ ಬ್ಯಾಟರ್‌ ಎನಿಸಿಕೊಂಡರು. ಭಾರತೀಯರ ಪೈಕಿ ರೋಹಿತ್‌ ಶರ್ಮಾ 555, ವಿರಾಟ್‌ ಕೊಹ್ಲಿ 443, ಸೂರ್ಯಕುಮಾರ್‌ 423, ಸಂಜು ಸ್ಯಾಮ್ಸನ್‌ 405, ಧೋನಿ 350 ಸಿಕ್ಸರ್‌ ಬಾರಿಸಿದ್ದಾರೆ. ವಿಶ್ವದಲ್ಲೇ ಗರಿಷ್ಠ ಸಿಕ್ಸರ್‌ ದಾಖಲೆ ಕ್ರಿಸ್‌ ಗೇಲ್‌(1056) ಹೆಸರಲ್ಲಿದೆ.

5ನೇ ಸಲ ಅಭಿಷೇಕ್ 10+ ಸಿಕ್ಸರ್‌ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ ತಲಾ 10+ ಸಿಕ್ಸರ್‌ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಭಿಷೇಕ್‌ 2ನೇ ಸ್ಥಾನಕ್ಕೇರಿದ್ದಾರೆ. ಅವರು 5 ಬಾರಿ ಈ ಸಾಧನೆ ಮಾಡಿದ್ದಾರೆ. ಕ್ರಿಸ್‌ ಗೇಲ್‌ 18 ಇನ್ನಿಂಗ್ಸ್‌ಗಳಲ್ಲಿ ತಲಾ 10+ ಸಿಕ್ಸರ್‌ ಬಾರಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರೇಯಸ್‌ ಅಯ್ಯರ್‌, ಎವಿನ್‌ ಲೆವಿಸ್‌ ತಲಾ 4 ಬಾರಿ ಈ ಸಾಧನೆ ಮಾಡಿದ್ದಾರೆ.

4ನೇ 130+ ರನ್‌

ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್‌ 4ನೇ ಬಾರಿ 130+ ರನ್‌ ಕಲೆಹಾಕಿದ್ದಾರೆ. ಇದು ಗರಿಷ್ಠ. ಕ್ರಿಸ್‌ ಗೇಲ್‌, ಆ್ಯರೊನ್‌ ಫಿಂಚ್‌ ತಲಾ 3 ಬಾರಿ ಈ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್‌

ಆಟಗಾರ ರನ್‌ ಎದುರಾಳಿ ವರ್ಷ

ಕ್ರಿಸ್‌ ಗೇಲ್‌ 175* ಪುಣೆ 2013

ಮೆಕ್ಕಲಮ್‌ 158* ಆರ್‌ಸಿಬಿ 2008

ಅಭಿಷೇಕ್‌ 141 ಪಂಜಾಬ್‌ 2025

ಡಿ ಕಾಕ್‌ 140* ಕೆಕೆಆರ್‌ 2022

ಅಭಿಷೇಕ್‌ 135* ಡೆಲ್ಲಿ 2026