ಡಬ್ಲ್ಯೂಸಿಎಲ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ವೆಸ್ಟ್ ಇಂಡೀಸ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ರಿಚರ್ಡ್ ಲೆವಿ ಜೊತೆಯಾಟದೊಂದಿಗೆ ತಂಡ 243 ರನ್ ಗಳಿಸಿದ್ದು, ಕ್ರಿಸ್ ಗೇಲ್ ಹೋರಾಟದ ನಡುವೆಯೂ ವಿಂಡೀಸ್ ಸೋಲನುಭವಿಸಿದೆ. ಎಬಿಡಿ ಆಟ ಕಂಡು ಆರ್‍‌ಸಿಬಿ ಅಭಿಮಾನಿಗಳು ಅವರು ಮತ್ತೆ ತಂಡಕ್ಕೆ ಮರಳುವಂತೆ ಆಶಿಸುತ್ತಿದ್ದಾರೆ.

ಆರ್‍‌ಸಿಬಿ ತಂಡದ ಹಳೆ ಹುಲಿ, ‘ಮಿಸ್ಟರ್ 360 ಡಿಗ್ರಿ’ ಎಬಿ ಡಿವಿಲಿಯರ್ಸ್ (AB de Villiers) ಮತ್ತೆ ಮೈದಾನದಲ್ಲಿ ಆರ್ಭಟಿಸಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಬ್ಯಾಟಿಂಗ್‌ನಲ್ಲಿರುವ ಖದರ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನ ಮತ್ತೆ ತೋರಿಸಿಕೊಟ್ಟರು.

ಹೌದು.. ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2026) ಟೂರ್ನಿಯಲ್ಲಿ ಎಬಿಡಿ ಮಿಂಚಿದ್ದಾರೆ. WCL ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದ ಎಬಿಡಿ.. ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಅಭಿಮಾನಿಗಳಿಗೆ ಹಳೆಯ ದಿನಗಳನ್ನು ನೆನಪಿಸಿದ್ದಾರೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಡಿತ್ತು. ಫಾಫ್ ಡುಪ್ಲೆಸಿಸ್ (14 ರನ್) ಗಳಿಸಿ ಆರಂಭದಲ್ಲೇ ವಿಕೆಟ್ ಒಪ್ಪಿಸಿಬಿಟ್ಟರು. ನಂತರ ಕ್ರೀಸ್‌ಗೆ ಬಂದ ನಾಯಕ ಎಬಿ ಡಿವಿಲಿಯರ್ಸ್..ಆರಂಭಿಕ ಆಟಗಾರ ರಿಚರ್ಡ್ ಲೆವಿ ಜೊತೆಗೂಡಿ ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಬರೋಬ್ಬರಿ 104 ರನ್‌ಗಳ ಸ್ಫೋಟಕ ಜೊತೆಯಾಟ ನೀಡಿತು.

ರಿಚರ್ಡ್ ಲೆವಿ ಕೇವಲ 39 ಎಸೆತಗಳಲ್ಲಿ 8 ಸಿಕ್ಸರ್

ರಿಚರ್ಡ್ ಲೆವಿ ಕೇವಲ 39 ಎಸೆತಗಳಲ್ಲಿ 8 ಸಿಕ್ಸರ್, 5 ಬೌಂಡರಿಗಳೊಂದಿಗೆ ಭರ್ಜರಿ 87 ರನ್ ಚಚ್ಚಿದರು. ನಾಯಕ ಎಬಿ ಡಿವಿಲಿಯರ್ಸ್ 39 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳ ಬಾರಿಸಿದರು. 179 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 70 ರನ್‌ಗಳಿಸಿದರು. ಅಂತಿಮವಾಗಿ ಡ್ವೇನ್ ಬ್ರಾವೋ ಅವರ ಅದ್ಭುತ ಕ್ಯಾಚ್‌ಗೆ ಎಬಿಡಿ ಇನ್ನಿಂಗ್ಸ್ ಅಂತ್ಯಗೊಂಡಿತು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

243 ರನ್‌ಗಳ ಗುರಿ ಬೆನ್ನಟ್ಟಿದ ವೆಸ್ಟ್ ವಿಂಡೀಸ್.. 52 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅಬ್ಬರದ ಆಟವಾಡಿದರು. 31 ಎಸೆತಗಳನ್ನು ಎದುರಿಸಿದ ಗೇಲ್.. 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 60 ರನ್ ಬಾರಿಸಿದರು. ಕೊನೆಗೆ ಸ್ಪಿನ್ನರ್ ಆರೋನ್ ಫಂಗಿಸೊ ಎಸೆತದಲ್ಲಿ ಗೇಲ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇದರೊಂದಿಗೆ ವೆಸ್ಟ್ ವಿಂಡೀಸ್ ಗೆಲುವಿನ ಕನಸು ಕಮರಿ ಹೋಯಿತು. ಒಟ್ಟಾರೆ ಈ ಪಂದ್ಯದಲ್ಲಿ ಮೂವರು ಬ್ಯಾಟರ್‍‌ಗಳು ಭರ್ಜರಿ ಮನರಂಜನೆ ನೀಡಿದರು.

ಆರ್‍‌ಸಿಬಿಗೆ ಕಂಬ್ಯಾಕ್ ಮಾಡ್ತಾರಾ ಎಬಿಡಿ

ಇನ್ನು ಎಬಿಡಿ ಆಟವನ್ನು ಕಣ್ತುಂಬಿಕೊಂಡ ಆರ್‍‌ಸಿಬಿ ಅಭಿಮಾನಿಗಳು ತುಂಬಾ ಎಕ್ಸೈಟ್ ಆಗಿದ್ದಾರೆ. ತುಂಬಾ ದಿನಗಳ ನಂತರ ಎಬಿಡಿ ಆಟವನ್ನು ನೋಡಿ ಖುಷಿ ಪಟ್ಟಿದ್ದಾರೆ. ಮಿಸ್ಟರ್ 360 ಡಿಗ್ರಿ ಆರ್‍‌ಸಿಬಿ ಪರ ಆಡಲು ಬಂದರೆ ಅದರ ಮಜವೇ ಬೇರೆ ಇರುತ್ತದೆ. ಎಬಿಡಿ ಮತ್ತೆ ಬನ್ನಿ ನಾವು ನಿಮ್ಮನ್ನ ಹೊತ್ತು ಮರೆಸ್ತೀವಿ ಎಂಬ ಮಾತುಗಳನ್ನ ಆರ್‍‌ಸಿಬಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರತಿವರ್ಷ ಐಪಿಎಲ್ ಹತ್ತಿರ ಬರುತ್ತಿದ್ದಂತೆಯೇ ಎಬಿಡಿಯನ್ನ ಆರ್‍‌ಸಿಬಿ ಅಭಿಮಾನಿಗಳು ನೆನಪಿಸಿಕೊಳ್ತಾರೆ. ಮತ್ತೆ ಆರ್‍‌ಸಿಬಿಗೆ ಜಾಯಿನ್ ಆಗ್ತಾರೆ ಎಂದು ಹೇಳ್ತಾರೆ. ಆದರೆ ಕೊನೆಯಲ್ಲಿ ಅದೆಲ್ಲ ಮತ್ತೆ ಮತ್ತೆ ಸುಳ್ಳಾಗ್ತಿದೆ. ಅದೇನೇ ಇರಲಿ, ಎಬಿಡಿ ಈಗಲೂ ಕೂಡ ಅದೇ ಖದರ್‍‌ನಲ್ಲಿ ಬ್ಯಾಟ್ ಬೀಸುತ್ತಿರೋದು ನಿಜಕ್ಕೂ ಗ್ರೇಟ್!