ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪ್ರಶ್ನೆ ಮಾಡಿದ ಸವಾರನಿಗೆ ನಡು ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಟಾಟಾ ಏಸ್‌ ವಾಹನದ ಚಾಲಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಏ.09): ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪ್ರಶ್ನೆ ಮಾಡಿದ ಸವಾರನಿಗೆ ನಡು ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಟಾಟಾ ಏಸ್‌ ವಾಹನದ ಚಾಲಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್‌.ಪುರಂನ ಸೀಗೇಹಳ್ಳಿ ನಿವಾಸಿ ಅರುಣ್‌ ಕುಮಾರ್‌(27) ಬಂಧಿತ. ರಾಮಮೂರ್ತಿನಗರದ ಬ್ರಿಡ್ಜ್‌ ಬಳಿ ಶುಕ್ರವಾರ ಮಧ್ಯಾಹ್ನ ಪ್ರಕಾಶ್‌ ಎಂಬುವವರು ದ್ವಿಚಕ್ರ ವಾಹನದಲ್ಲಿ ತಮ್ಮ ತಂದೆ ಜತೆಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಯ ಬಲಭಾಗದಲ್ಲಿ ಟಾಟಾ ಏಸ್‌ ವಾಹನ ಚಾಲನೆ ಮಾಡುತ್ತಿದ್ದ ಅರುಣ್‌, ಮೊಬೈಲ್‌ನಲ್ಲಿ ಮಾತನಾಡುತ್ತಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. 

ಇದನ್ನು ಪ್ರಕಾಶ್‌ ಅವರ ತಂದೆ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಚಾಲಕ ಅರುಣ್‌ ಸಾರ್ವಜನಿಕರ ಎದುರೇ ಚಾಕು ತೆಗೆದು ಪ್ರಕಾಶ್‌ ಅವರ ತಂದೆ ಜತೆ ವಾಗ್ವಾದ ನಡೆಸಿ ಜೀವ ಬೆದರಿಕೆ ಹಾಕಿದ್ದ. ಈ ಘಟನೆ ಕುರಿತು ಪ್ರಕಾಶ್‌ ಅವರು ಟ್ವಿಟರ್‌ನಲ್ಲಿ ಚಾಲಕ ಅರುಣ್‌ ಚಾಕು ಹಿಡಿದು ಬೆದರಿಕೆ ಹಾಕುವ ವಿಡಿಯೋ ಹಂಚಿಕೊಂಡು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಮನವಿ ಮಾಡಿದ್ದರು. ಈ ಸಂಬಂಧ ರಾಮಮೂರ್ತಿ ನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. 

ಕುಡಿದ ನಶೆಯಲ್ಲಿ ಇಂಡಿಗೋ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆಯಲೆತ್ನ: ಪ್ರಯಾಣಿಕನ ಬಂಧನ

ಇದೀಗ ಸಂಚಾರ ಪೊಲೀಸರ ನೆರವಿನಿಂದ ಆರೋಪಿ ಅರುಣ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಕೆರೆ ನಿವಾಸಿ ನಿಶಾಂತ್‌ ಎಂಬುವವರ ಮಾಲಿಕತ್ವದ ಟಾಟಾ ಏಸ್‌ ವಾಹನದಲ್ಲಿ ಕಳೆದ ಒಂದು ವರ್ಷದಿಂದ ಆರೋಪಿ ಅರುಣ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ‘ರಾತ್ರಿ ವೇಳೆ ಕೆಲಸ ನಿಮಿತ್ತ ಒಬ್ಬನೇ ವಾಹನದಲ್ಲಿ ಓಡಾಡುತ್ತಿರುತ್ತೇನೆ. ಹೀಗಾಗಿ ಸ್ವಯಂ ರಕ್ಷಣೆಗಾಗಿ ಜತೆಯಲ್ಲಿ ಚಾಕು ಇರಿಸಿಕೊಂಡಿದ್ದೆ’ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಈ ಹಿಂದೆ ಈತ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೂರಿ ಇರಿದು ಹಲ್ಲೆ: ಇಬ್ಬರಿಗೆ ಚೂರಿಯಿಂದ ಇರಿದು ಮತ್ತು ನಾಲ್ವರ ಮೇಲೆ ಹಲ್ಲೆ ಮಾಡಿದ್ದ ಐವರು ಯುವಕರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್‌. ಮಾನು ಅವರು ಗುರುವಾರ ತೀರ್ಪು ನೀಡಿದ್ದಾರೆ. ನಗ​ರದ ಕೊರಮಕೇರಿ ನಿವಾಸಿಗಳಾದ ವಿಜಯಕುಮಾರ್‌ (26) ಪ್ರವೀಣ್‌ (20), ನವೀನ್‌ (24), ಚೇತನ್‌ (24) ಹಾಗೂ ಸಂತೋಷ್‌ (33) ಶಿಕ್ಷೆಗೊಳಗಾದವರು. 

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಮೊಪೆಡ್‌: ಎಚ್‌ಡಿಕೆ ಭರವಸೆ

ಅವರಿಗೆ 65 ಸಾವಿರ ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. 2018ರ ಜ.20ರಂದು ಶಿಕ್ಷೆಗೊಳಗಾದ ಯುವಕರು ಗೋವಿಂದಾಪುರ ಗ್ರಾಮದ ನಿವಾಸಿಗಳಾದ ನವೀನ್‌, ನಿತಿನ್‌, ಗೋಪಿ, ಲೋಹಿತ್‌, ಪ್ರಜ್ವಲ್‌, ರಾಜು ಅವರ ಮೇಲೆ ಹಳೆ ವೈಷಮ್ಯದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನವೀನ್‌ ಮತ್ತು ನಿತಿನ್‌ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಉಳಿದವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದರು. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.