ಕ್ರೈಸ್ಟ್‌ಚರ್ಚ್‌(ನ.28): ಕಿವೀಸ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡವನ್ನು ಕೊರೋನಾ ಹೆಮ್ಮಾರಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಕ್ರೈಸ್ಟ್‌ಚರ್ಚ್‌ನ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ 7ನೇ ಆಟಗಾರನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಪಾಕಿಸ್ತಾನ ಕ್ರಿಕೆಟ್‌ ತಂಡ ಕಿವೀಸ್‌ ನಾಡಿಗೆ ಬಂದಿಳಿದು ಕೇವಲ 4 ದಿನಗಳು ಮಾತ್ರ ಕಳೆದಿವೆ. ಅಷ್ಟರೊಳಗಾಗಿ ಆಟಗಾರರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಅಂತಿಮ ಎಚ್ಚರಿಕೆ ಪಡೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಪಾಕಿಸ್ತಾನ ತಂಡದಲ್ಲಿ ಕೊರೋನಾ ಸೋಂಕು ಹೆಚ್ಚು ಪತ್ತೆಯಾಗುತ್ತಿರುವುದರಿಂದ ಪಾಕ್‌-ಕಿವೀಸ್ ಸರಣಿ ನಡೆಯುವುದು ಅನುಮಾನ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ.  

ನ್ಯೂಜಿಲೆಂಡ್‌ಗೆ ವಿಮಾನ ಏರುವ ಮುನ್ನ ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ ಎಲ್ಲಾ ಪಾಕಿಸ್ತಾನದ ಆಟಗಾರ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ನ್ಯೂಜಿಲೆಂಡ್‌ಗೆ ಬಂದಿಳಿದು ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿ ಮೊದಲ ದಿನ ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ 6 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. 

ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ಗೆ ಬಂದಳಿದ 6 ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೋನಾ!

ಮತ್ತೋರ್ವ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಇಂದು ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಶನಿವಾರ(ನ.28) ನ್ಯೂಜಿಲೆಂಡ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. 
ನ್ಯೂಜಿಲೆಂಡ್‌ಗೆ ಬಂದಿಳಿಯುವ ಎಲ್ಲಾ ವಿದೇಶಿಗರು ಕಡ್ಡಾಯವಾಗಿ 2 ವಾರಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಡಿಸೆಂಬರ್ 18ರಿಂದ 3 ಪಂದ್ಯಗಳ ಟಿ20 ಸರಣಿಯಾಡಲಿದೆ. ಆ ಬಳಿಕ 2 ಪಂದ್ಯಗಳ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದೆ.