ಮುಂಬರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಬೃಹತ್‌ ಆದಾಯದ ನಿರೀಕ್ಷೆಯಲ್ಲಿದೆ.

ಲಂಡನ್‌: ಮುಂಬರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಬೃಹತ್‌ ಆದಾಯದ ನಿರೀಕ್ಷೆಯಲ್ಲಿದೆ. ಈ ಸರಣಿಯನ್ನು ಆರ್ಥಿಕತೆ ದೃಷ್ಟಿಯಿಂದ ಆ್ಯಶಸ್‌ನಷ್ಟೇ ಮುಖ್ಯ ಎಂದಿರುವ ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿಚರ್ಡ್‌ ಗೌಲ್ಡ್‌, ಸರಣಿಯು ತಮ್ಮ ಕ್ರಿಕೆಟ್‌ ಮಂಡಳಿಗೆ ಹಣದ ಹೊಳೆಯನ್ನೇ ಹರಿಸಲಿದೆ ಎಂದಿದ್ದಾರೆ.

ಒಂದು ಅಂದಾಜಿನ ಪ್ರಕಾರ, ಟೀವಿ ಹಾಗೂ ಡಿಜಿಟಲ್‌ ಪ್ರಸಾರ ಹಕ್ಕು ಮಾರಾಟ, ಪ್ರಾಯೋಜಕತ್ವ, ಟಿಕೆಟ್‌ಗಳ ಮಾರಾಟ, ಕ್ರೀಡಾಂಗಣಗಳ ಒಳಗೆ ಜಾಹೀರಾತು, ಆಹಾರ ಹಾಗೂ ಮದ್ಯ ಮಾರಾಟ ಎಲ್ಲಾ ಸೇರಿ ಇಸಿಬಿಗೆ 600ರಿಂದ 800 ಕೋಟಿ ರು. ಆದಾಯ ಬರಬಹುದು ಎಂದು ಹೇಳಲಾಗಿದೆ.

2024ರಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಆರ್ಥಿಕವಾಗಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ ಟೆಸ್ಟ್‌ ಆಡಿ ಗೆದ್ದಾಗ, ಅರ್ಧಕರ್ಧ ಆಸನಗಳು ಖಾಲಿ ಇದ್ದವು. ಇದು ಇಸಿಬಿಯನ್ನು ಮುಜುಗರಕ್ಕೆ ಸಿಲುಕಿಸಿತ್ತು. ಆದರೆ, ಭಾರತ ವಿರುದ್ಧದ ಸರಣಿಗೆ ಕಳೆದ ವರ್ಷ ಟಿಕೆಟ್‌ ಮಾರಾಟ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸೋಲ್ಡ್‌ ಔಟ್‌ ಆಗಿತ್ತು. ಎಲ್ಲಾ 5 ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗುವ ನಿರೀಕ್ಷೆ ಇದ್ದು, ಸರಣಿ ಆರಂಭಕ್ಕೆ ಎದುರು ನೋಡುತ್ತಿರುವುದಾಗಿ ಗೌಲ್ಡ್‌ ಹೇಳಿಕೊಂಡಿದ್ದಾರೆ.