ಚೆನ್ನೈ(ಫೆ.02): ಫೆಬ್ರವರಿ 13 ರಿಂದ ಇಲ್ಲಿ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್‌ ಪಂದ್ಯಕ್ಕೆ ಶೇ.50 ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಲು ಬಿಸಿಸಿಐ ಮತ್ತು ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ) ನಿರ್ಧರಿಸಿದೆ. ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಯ 3ನೇ ಹಾಗೂ 4ನೇ ಪಂದ್ಯಗಳಿಗೂ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. 1 ಲಕ್ಷದ 10 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಮೊಟೇರಾ ಕ್ರೀಡಾಂಗಣದಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸುವ ಯೋಚನೆಯಲ್ಲಿ ಬಿಸಿಸಿಐ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌: ಪ್ರೇಕ್ಷಕರಿಗೆ ಪ್ರವೇಶ?

3ನೇ ಟೆಸ್ಟ್‌ಗೆ ಮೋದಿಗೆ ಆಹ್ವಾನ?

ಫೆ.24 ರಿಂದ 28 ರವರೆಗೆ ಇಲ್ಲಿನ ಮೊಟೇರಾ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಲಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯ ವೀಕ್ಷಣೆಗೆ ಮೋದಿ ಅವರನ್ನು ಆಹ್ವಾನಿಸಲು ಚಿಂತನೆ ನಡೆಸಿದೆ.