ಅಹಮದಾಬಾದ್‌, (ಫೆ.25): ಮೊಟೆರಾಕ್ಕೆ 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ಮರು ನಾಮಕರಣ ಮಾಡಲಾಗಿದ್ದು, ನವೀಕರಣಗೊಂಡ ಪಿಚ್‌ನಲ್ಲಿ ಭಾರತಕ್ಕೆ ಅದೃಷ್ಟ ಕುಲಾಯಿಸಿದೆ.

ಹೌದು...ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಕ್ಕೆ ಮುಗಿದಿದ್ದು, ಮೋದಿ ಪಿಚ್‌ನಲ್ಲಿ ಸ್ಪಿನ್ ಮೋಡಿಯಲ್ಲಿ ಅಂತಿಮವಾಗಿ ಟೀಂ ಇಂಡಿಯಾ ಗೆದ್ದು ಬಿಗಿದೆ. ಈ ಮೂಲಕ ಸರಣಿಯಲ್ಲಿ ಕೊಹ್ಲಿ ಬಳಗ 2-1 ರಿಂದ ಮುನ್ನಡೆ ಸಾಧಿಸಿತು.

 ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು (ಗುರುವಾರ) ಟೀಂ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. 

ಅಶ್ವಿನ್‌ಗೆ ಆರ್ಚರ್‌ 400ನೇ ಬಲಿ, ಹೊಸ ದಾಖಲೆ ಬರೆದ ಸ್ಪಿನ್‌ ಮಾಂತ್ರಿಕ..! 

2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್​ ನೀಡಿದ 49 ರನ್​ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಬಾಯ್ಸ್, ಯಾವುದೇ ವಿಕೆಟ್​ ನಷ್ಟವಿಲ್ಲದೆ ಗೆಲುವಿನ ಗುರಿ ಮುಟ್ಟಿದರು.

ಮೋದಿ ಪಿಚ್‌ನಲ್ಲಿ ಸ್ಪಿನ್ ಮೋಡಿ
ಯೆಸ್ ಮೋದಿ ಪಿಚ್‌ನಲ್ಲಿ ಸ್ಪಿನ್ ಮೋಡಿಯೇ ವರ್ಕೌಟ್ ಆಗಿದ್ದು, ಎರಡನೇ ದಿನದಾಟದಲ್ಲಿ ಒಟ್ಟು 17 ವಿಕೆಟ್‌ಗಳು ಪತನವಾಗಿವೆ. ಹೀಗೆ ಎರಡೂ ತಂಡದಿಂದಲೂ  ಸ್ಪಿನ್ ಜಾದು ನಡೆದಿದ್ದು,  ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತಿಣುಕಾಡಿದರು. ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​ ಪಟೇಲ್​ 2 ಇನ್ನಿಂಗ್ಸ್​ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು.
 
ಸ್ಕೋರ್ ವಿವರ
ಮೊದಲ ಬ್ಯಾಟ್ ಮಾಡಿದ ಆಂಗ್ಲರು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 112ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಸ್ಪಿನ್ ಮೋಡಿಗೆ 145ಕ್ಕೆ ಸರ್ವಪತನ ಕಂಡಿತು.

ಭಾರತವನ್ನು 145 ರನ್‌ಗಳಿಗೆ ಆಲೌಟ್‌ ಮಾಡಿ 2ನೇ ಇನ್ನಿಂಗ್ಸ್‌ ಶುರುವಾಡಿದ ಇಂಗ್ಲೆಂಡ್‌ ತಂಡ ಅಕ್ಷರ್‌ ಪಟೇಲ್‌ ಹಾಗೂ ರವಿಚಂದ್ರನ್ ಅಶ್ವಿನ್‌ ಮಿಂಚಿನ ದಾಳಿಗೆ ಕೇವಲ 81 ರನ್‌ಗಳಿಗೆ ಸರ್ವಪತನ ಕಂಡಿತು. 

ಒಟ್ಟಿನಲ್ಲಿ ಮೋದಿ ಪಿಚ್‌ನಲ್ಲಿ ನಡೆದ ಈ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ನಡೆದ  ಸ್ಪಿನ್ ಕಾಳಗದಲ್ಲಿ ಅಂತಿಮವಾಗಿ ಟೀಂ ಇಂಡಿಯಾದ ಸ್ಪಿನ್ ಮೇಲುಗೈ ಸಾಧಿಸಿತು.