Asianet Suvarna News Asianet Suvarna News

1983 World Cup: ದೇಶವೇ ಸಂಭ್ರಮಿಸಿದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ 39ರ ಹರೆಯ..!

1983ರ ಏಕದಿನ ವಿಶ್ವಕಪ್ ಗೆಲುವಿಗೆ 39ರ ಸಂಭ್ರಮ
ವೆಸ್ಟ್ ಇಂಡೀಸ್ ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕಪಿಲ್ ದೇವ್ ಪಡೆ
ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ

39 years of 1983 World Cup triumph Kapil Devils Team brought down the mighty Windies to inspire entire nation kvn
Author
Bengaluru, First Published Jun 25, 2022, 11:47 AM IST

ಬೆಂಗಳೂರು(ಜೂ.25): ಸದ್ಯ ಭಾರತ ಕ್ರಿಕೆಟ್ ತಂಡವು (Indian Cricket Team) ವಿಶ್ವದ ಬಲಾಢ್ಯ ಕ್ರಿಕೆಟ್‌ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ. ಆದರೆ ಇಂದು ಟೀಂ ಇಂಡಿಯಾ ಇಷ್ಟು ಬಲಿಷ್ಠ ತಂಡವಾಗಿ ಹೊರಹೊಮ್ಮಲು ಕಾರಣವಾಗಿದ್ದು, 1983ರ ಏಕದಿನ ವಿಶ್ವಕಪ್‌ ಗೆಲುವು. ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ, ಹಾಲಿ ಚಾಂಪಿಯನ್ ಆಗಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 1983 ಜೂನ್ 25 ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿತ್ತು. ಈ ಐತಿಹಾಸಿಕ ಘಟನೆ ನಡೆದು ಇಂದಿಗೆ 39 ವರ್ಷಗಳು ಸಂದಿವೆ.

ಕಪಿಲ್ ದೇವ್ (Kapil Dev Led Team India) ನೇತೃತ್ವದ ಭಾರತ ಕ್ರಿಕೆಟ್ ತಂಡವು 1983ರ ಏಕದಿನ ವಿಶ್ವಕಪ್ ಆಡಲು ಇಂಗ್ಲೆಂಡ್‌ಗೆ ಹೊರಟಾಗ ಯಾವುದೇ ನಿರೀಕ್ಷೆಗಳಿರಲಿಲ್ಲ. ಯಾಕೆಂದರೆ 1975 ಹಾಗೂ 1979ರಲ್ಲಿ ನಡೆದಿದ್ದ ಎರಡು ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಹೀಗಾಗಿ ಭಾರತ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿರಲಿಲ್ಲ. ಆದರೆ ಕಪಿಲ್ ಡೆವಿಲ್ಸ್‌, ಯಾವುದೂ ಅಸಾಧ್ಯವಲ್ಲ ಎಂದು ಸಾಬೀತು ಮಾಡುವ ಮೂಲಕ ಭಾರತ ಕ್ರಿಕೆಟ್‌ಗೆ ಹೊಸ ಆಯಾಮ ಕಲ್ಪಿಸಿತು.

ಕ್ರಿಕೆಟ್ ಅಭಿಮಾನಿಗಳು ಒತ್ತಟ್ಟಿಗಿರಲಿ, ಸ್ವತಃ ಭಾರತ ಕ್ರಿಕೆಟ್ ತಂಡದಲ್ಲಿದ್ದ ಕೆಲವು ಆಟಗಾರರಿಗೂ ಕೂಡಾ ತಾವು ವಿಶ್ವಕಪ್ ಗೆಲ್ಲಲಿದ್ದೇವೆ ಎನ್ನುವ ವಿಶ್ವಾಸವಿರಲಿಲ್ಲ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಕೀರ್ತಿ ಆಜಾದ್ ಅವರಂತಹ ಆಟಗಾರರು ಇಂದೊಂದು ರೀತಿ ಹಾಲಿಡೇ ಟ್ರಿಫ್ ರೀತಿ ಪರಿಗಣಿಸಿದ್ದರು. ಆದರೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಅಸಾಧ್ಯವಾದುದ್ದನ್ನು ಸಾಧ್ಯ ಮಾಡಿ ತೋರಿಸಿಕೊಟ್ಟರು.

1983ರ ವಿಶ್ವಕಪ್ (1983 World Cup) ಟೂರ್ನಿಯ ಮೊದಲ ಪಂದ್ಯದಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ (Team India) ತಾನಾಡಿದ ಚೊಚ್ಚಲ ಪಂದ್ಯದಲ್ಲಿಯೇ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್‌ ತಂಡಕ್ಕೆ ಶಾಕ್ ನೀಡುವ ಮೂಲಕ ಶುಭಾರಂಭ ಮಾಡಿತ್ತು. ಗ್ರೂಪ್ ಹಂತದ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಗೆಲುವು ದಾಖಲಿಸಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಎದುರು ಹೀನಾಯ ಸೋಲು ಅನುಭವಿಸಿದ ಕಪಿಲ್ ದೇವ್ ಪಡೆ, ಜಿಂಬಾಬ್ವೆ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಪಿಲ್ ದೇವ್ ಬಾರಿಸಿದ ಆಕರ್ಷಕ 175 ರನ್‌ಗಳ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿತ್ತು.

ಇನ್ನು 1983ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮತ್ತೊಮ್ಮೆ ಭಾರತಕ್ಕೆ ವೆಸ್ಟ್ ಇಂಡೀಸ್ ತಂಡವೇ ಎದುರಾಗಿತ್ತು. ಸತತ ಎರಡು ಏಕದಿನ ವಿಶ್ವಕಪ್ ಜಯಿಸಿದ್ದ ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಭಾರತ ತಂಡವು ಆರಂಭದಲ್ಲೇ ಸುನಿಲ್ ಗವಾಸ್ಕರ್(2) ವಿಕೆಟ್ ಕಳೆದುಕೊಂಡಿತು. ಕೃಷ್ಣಮಾಚಾರಿ ಶ್ರೀಕಾಂತ್(38), ಸಂದೀಪ್ ಪಾಟೀಲ್(27) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 183 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತ ಹೇಳಿದಂತೆಯೇ ಎಲ್ಲಾ ನಡೆಯುತ್ತೆ: ಇಂಡಿಯಾವನ್ನು ಕೊಂಡಾಡಿದ ಪಾಕ್ ಕ್ರಿಕೆಟಿಗ ಶಾಹಿದ್‌ ಅಫ್ರಿದಿ

ಇನ್ನು ಈ ಸಾಧಾರಣ ಗುರಿ ಬೆನ್ನತ್ತಿದ ವಿಂಡೀಸ್ ತಂಡಕ್ಕೆ ಭಾರತದ ವೇಗಿಗಳು ಮಾರಕ ದಾಳಿ ನಡೆಸುವ ಮೂಲಕ ಇನ್ನಿಲ್ಲದಂತೆ ಕಾಡಿದರು. ವೀವ್ ರಿಚರ್ಡ್ಸ್‌, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಡ್ಜ್ ಅವರಂತಹ ಬಲಿಷ್ಠ ಬ್ಯಾಟರ್‌ಗಳನ್ನು ದೊಡ್ಡಮೊತ್ತ ಕಲೆಹಾಕದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು 140 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ವಿಶ್ವ ಚಾಂಪಿಯನ್ ಅಗಿ ಮೆರೆದಾಡಿತು. 

1983ರ ಏಕದಿನ ವಿಶ್ವಕಪ್‌ ಗೆಲುವಿನ ಸಂಭ್ರಮಾಚರಣೆಯನ್ನು ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಟ್ವೀಟ್‌ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios