ಮೆಲ್ಬರ್ನ್(ಆ.15): ಇಂಗ್ಲೆಂಡ್ ವಿರುದ್ಧದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗೆ 21 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರಿಗೆ ರಾಷ್ಟ್ರೀಯ ತಂಡಕ್ಕೆ ಬುಲಾವ್ ಬಂದಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿರುವ ಜೋಸ್ ಫಿಲಿಫ್, ರಿಲೇ ಮೆರಿಡ್ಜ್ ಹಾಗೂ ಡ್ಯಾನಿಯಲ್ ಸ್ಯಾಮ್ಸ್ ಈ ಮೂವರು ಆಟಗಾರರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಕರೆ ಬಂದಿದೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರಿಂದ ಈ ಮೂವರು ಆಟಗಾರರು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಗ್ಲೆನ್ ಮ್ಯಾಕ್ಸ್‌ವೆಲ್, ನೇಥನ್ ಲಯನ್ ಹಾಗೂ ಮಾರ್ಕಸ್ ಸ್ಟೋನಿಸ್ ಸುಮಾರು ಆರು ತಿಂಗಳುಗಳ ಬಳಿಕ ರಾಷ್ಟ್ರೀಯ ತಂಡವನ್ನು ಕೂಡಿಕೊಂಡಿದ್ದಾರೆ. 

ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್-ಆಸೀಸ್ ಸೀಮಿತ ಓವರ್‌ಗಳ ಸರಣಿ ಖಚಿತ..!

ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಟಿ20 ಸರಣಿ ಸೆಪ್ಟೆಂಬರ್ 04ರಿಂದ 08ರವರೆಗೆ ನಡೆಯಲಿದೆ. ಇದಾದ ಬಳಿಕ ಏಕದಿನ ಸರಣಿ ಸೆಪ್ಟೆಂಬರ್ 11ರಿಂದ 16ರವರೆಗೆ ನಡೆಯಲಿದೆ.

ಆಸ್ಟ್ರೇಲಿಯಾ ತಂಡ ಹೀಗಿದೆ: 
ಆ್ಯರೋನ್ ಫಿಂಚ್(ನಾಯಕ), ಸೀನ್ ಅಬ್ಬೋಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಜೋಸ್ ಹ್ಯಾಜಲ್‌ವುಡ್, ಮಾರ್ನಸ್ ಲಬುಶೇನ್, ನೇಥನ್ ಲಯನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ರಿಲೇ ಮೆರಿಡ್ಜ್, ಜೋಸ್ ಫಿಲಿಫ್. ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಆ್ಯಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಜಂಪಾ.