ಟೀಂ ಇಂಡಿಯಾದ ಕಿರಿಯರ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರನ್ನಾಗಿ ಮಾಜಿ ವೇಗಿ ಪರ್ವಿಂದರ್ ಅವಾನ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಈ ಸ್ಥಾನದ ರೇಸ್‌ನಲ್ಲಿದ್ದ ಕನ್ನಡಿಗ ದೊಡ್ಡ ಗಣೇಶ್‌ಗೆ ನಿರಾಸೆಯಾಗಿದೆ. ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಅವಾನ್ ಅವರು ವಿವಿಧ ವಯೋಮಿತಿಯ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಪ್ರಗ್ಯಾನ್ ಓಜಾ ಅವರು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ.. ಬಿಸಿಸಿಐ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹಿರಿಯ ತಂಡದ ಆಯ್ಕೆಗಾರನ ನೇಮಕ ಬೆನ್ನಲ್ಲೇ ಕಿರಿಯರ ಆಯ್ಕೆ ಸಮಿತಿಗೆ ಮುಖ್ಯಸ್ಥರನ್ನ ನೇಮಕ ಮಾಡಿದೆ. ಟೀಂ ಇಂಡಿಯಾದ ಮಾಜಿ ವೇಗಿಗೆ ಬಿಸಿಸಿಐ ಮಣೆ ಹಾಕಿದೆ. ಈ ರೇಸ್‌ನಲ್ಲಿ ಕನ್ನಡಗಿ ದೊಡ್ಡ ಗಣೇಶ್ ಹೆಸರು ಕೇಳಿಬಂದಿರುವ ಬಗ್ಗೆ ವರದಿಯಾಗಿತ್ತು.
ಮಾಜಿ ವೇಗದ ಬೌಲರ್ ಪರ್ವಿಂದರ್ ಅವಾನ್ ಅವರನ್ನು ಕಿರಿಯ ತಂಡದ ಮುಖ್ಯ ಆಯ್ಕೆಗಾರರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ಇವತ್ತು ಮಧ್ಯಾಹ್ನ ಬಿಸಿಸಿಐ ಈ ಮಹತ್ವದ ಘೋಷಣೆಯನ್ನ ಮಾಡಿದೆ. ಬಿಸಿಸಿಐನ ಹೊಸ ಆಯ್ಕೆ ಸಮಿತಿಯಲ್ಲಿ ಕೃಷ್ಣ ದಾಸ್, ರಾಕೇಶ್ ಪಟೇಲ್ ಮತ್ತು ಎನ್. ಅರ್ಜುನ್ ಯಾದವ್ ಕೂಡ ಇದ್ದಾರೆ. ಅವರನ್ನು ವಿವಿಧ ವಲಯಗಳಿಗೆ ಆಯ್ಕೆದಾರರಾಗಿ ಬಿಸಿಸಿಐ ನೇಮಕ ಮಾಡಿದೆ.
ಹಾಗಿದ್ದರೆ.. ಪರ್ವಿಂದರ್ ಅವಾನ್ ಯಾರು ಅನ್ನೋ ವಿವರ ಹೀಗಿದೆ.. ನೋಯ್ಡಾದ ಹರೋಲಾ ಗ್ರಾಮದಿಂದ ಐಪಿಎಲ್ ಮೂಲಕ ಪರಿಚತರಾದರು. ನಂತರ ಟೀಂ ಇಂಡಿಯಾದಲ್ಲಿ ಸ್ಥಾನಪಡೆದು, ಅಷ್ಟೇ ವೇಗದಲ್ಲಿ ಮರೆಯಾದರು. ಇವರನ್ನು ಹರೋಲಾ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ಪರ್ವಿಂದರ್ ಅವಾನ ಭಾರತಕ್ಕಾಗಿ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಹೀಗಾಗಿ 2018 ರಲ್ಲಿ ಅಂದರೆ ತಮ್ಮ 31ನೇ ವಯಸ್ಸಿನಲ್ಲಿ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.
ಪರ್ವಿಂದರ್ ಅವಾನ್ 2004ರಲ್ಲಿ ಪರ್ವಿಂದರ್ ಅವಾನ್ ಇಎಸ್‌ಪಿಎನ್ ಮಹೀಂದ್ರಾ ಸ್ಕಾಪಿಯೋ ಸ್ಪೀಡ್‌ಸ್ಟರ್ ಟ್ಯಾಲೆಂಟ್ ಹಂಟ್ ಗೆದ್ದು ಬೀಗಿದರು. ಅಲ್ಲಿ ಅವರನ್ನು ವೇಗದ ಬೌಲರ್ ಎಂದು ಹೆಸರಿಸಲಾಯಿತು. ನಂತರ ಆಸ್ಟ್ರೇಲಿಯಾ ವೇಗಿ ಡೇಮಿಯನ್ ಫ್ಲೆಮಿಂಗ್ ಜೊತೆ ತರಬೇತಿ ಪಡೆಯುವ ಅವಕಾಶ ನೀಡಲಾಯಿತು. 20, 2012ರಂದು ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕೆ ಇಳಿಯುವ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಎಂಟ್ರಿಕೊಟ್ಟರು. ಅದೇ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನ ಆಡಿದರು. ಅದೇ ಅವರ ಕೊನೆಯ ಪಂದ್ಯವಾಗಿ ಪರಿಣಮಿಸಿತು.
ದೇಸಿಯ ಕ್ರಿಕೆಟ್‌ನಲ್ಲಿ ಪರ್ವಿಂದರ್ ಸಾಧನೆ!
- ಡಿಸೆಂಬರ್ 1, 2007 ರಂದು ಮೊದಲ ಪ್ರಥಮ ದರ್ಜೆ ಪಂದ್ಯ
- 2007 ರಿಂದ 2016 ರವರೆಗೆ ದೆಹಲಿಯನ್ನು ಪ್ರತಿನಿಧಿಸಿದರು
- 29.23 ರ ಸರಾಸರಿಯಲ್ಲಿ 191 ಪ್ರಥಮ ದರ್ಜೆ ವಿಕೆಟ್ ಪಡೆದರು
- ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು
- 2014ರ ಐಪಿಎಲ್ ಸೀಸನ್ ಕೊನೆಯ ಪಂದ್ಯವಾಗಿತ್ತು
ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಅವರು ಕೋಚಿಂಗ್‌ಗೆ ಮೇಲೆ ಗಮನ ಹರಿಸಿದರು. ದೆಹಲಿಯ U16, U19 ಮತ್ತು U23 ತಂಡಗಳೊಂದಿಗೆ ಕೆಲಸ ಮಾಡಿದರು. ಹಾಗೆಯೇ ಭಾರತ U19 ಮತ್ತು BCCI/ಸೆಂಟರ್ ಆಫ್ ಎಕ್ಸಲೆನ್ಸ್‌ನ ಹಲವಾರು ಉನ್ನತ-ಕಾರ್ಯಕ್ಷಮತೆಯ ಕಾರ್ಯಕ್ರಮಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಟೀಂ ಇಂಡಿಯಾ ಜ್ಯೂನಿಯರ್ ಆಯ್ಕೆ ಸಮಿತಿಗೆ ಕನ್ನಡಿಗ ದೊಡ್ಡ ಗಣೇಶ್ ಆಯ್ಕೆ ಆಗುತ್ತಾರೆ ಎನ್ನಲಾಗಿತ್ತು. ಇದೀಗ ದೊಡ್ಡ ಗಣೇಶ್ ಬದಲಿಗೆ ಪರ್ವಿಂದರ್ ಅವಾನ್‌ಗೆ ಮಣೆ ಹಾಕಿದೆ.







