ಆಕ್ಲೆಂಡ್‌(ನ.27): ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಆತಿಥೇಯ ನ್ಯೂಜಿಲೆಂಡ್ ತಂಡ ಡೆಕ್ವರ್ಥ್ ಲೆವಿಸ್ ನಿಯಮದನ್ವಯ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿದೆ. ವೇಗಿ ಲಾಕಿ ಫರ್ಗ್ಯೂಸನ್ 21 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. 

ವೆಸ್ಟ್ ಇಂಡೀಸ್‌ ನೀಡಿದ್ದ 181 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್(5) ವಿಕೆಟ್‌ ಕಳೆದುಕೊಂಡಿತು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್ ಆಟ ಕೇವಲ 17 ರನ್‌ಗಳಿಗೆ ಸೀಮಿತವಾಯಿತು. ಆರಂಭಿಕ ಆಘಾತದಿಂದ ಕಂಗಾಲಾಗಿದ್ದು ಕಿವೀಸ್‌ ತಂಡಕ್ಕೆ ಡೇವೊನ್ ಕಾನ್ವೇ(41) ಹಾಗೂ ಗ್ಲೆನ್ ಫಿಲಿಪ್ಸ್(22) ಆಸರೆಯಾದರು. ಇನ್ನು ಮತ್ತೋರ್ವ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. 

ಒಂದು ಹಂತದಲ್ಲಿ 63 ರನ್‌ಗಳಿಗೆ 4 ಕಳೆದುಕೊಂಡು ಸಂಕಷ್ಟದಲ್ಲಿದ್ದು ನ್ಯೂಜಿಲೆಂಡ್ ತಂಡಕ್ಕೆ ಕಾನ್ವೇ ಹಾಗೂ ಆಲ್ರೌಂಡರ್ ಜೇಮ್ಸ್ ನೀಶಮ್ ಆಸರೆಯಾದರು. ನೀಶಮ್ ಕೇವಲ 24 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸಿದರೆ, ಮಿಚೆಲ್ ಸ್ಯಾಂಟ್ನರ್ 18 ಎಸೆತಗಳಲ್ಲಿ 3 ಸಮಯೋಚಿತ ಸಿಕ್ಸರ್‌ಗಳ ನೆರವಿನಿಂದ 31 ರನ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಇಂಡೋ-ಅಸೀಸ್ ಪಂದ್ಯದಲ್ಲಿ Stop Adani ಪ್ರತಿಭಟನೆ..! ಯಾಕೆ ಹೀಗೆ?

ವ್ಯರ್ಥವಾದ ಪೊಲ್ಲಾರ್ಡ್ ಹೋರಾಟ:
ಇದಕ್ಕೂ ಮೊದಲು ಟಾಸ್ ಸೋತರು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್‌ಗೆ ಆಂಡ್ರೆ ಫ್ಲೇಚರ್(34) ಹಾಗೂ ಬ್ರೆಂಡನ್ ಕಿಂಗ್(13) ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ 19 ಎಸೆತಗಳಲ್ಲಿ ಈ ಜೋಡಿ 58 ರನ್‌ಗಳ ಜತೆಯಾಟವಾಡಿತು. ಆದರೆ ಆ ಬಳಿಕ ತಂಡದ ಖಾತೆಗೆ ಇನ್ನೊಂದು ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಹೆಟ್ಮೇಯರ್(0), ಪೂರನ್(1) ಹಾಗೂ ರೋಮನ್ ಪೋವೆಲ್(೦) ಪೆವಿಲಿಯನ್ ಪರೇಡ್ ನಡೆಸಿದರು.

ಈ ಬಳಿಕ 6ನೇ ವಿಕೆಟ್‌ಗೆ ಜತೆಯಾದ ನಾಯಕ ಕೀರಾನ್ ಪೊಲ್ಲಾರ್ಡ್ ಹಾಗೂ ಫ್ಯಾಬಿಯನ್ ಅಲೆನ್ ಆಕರ್ಷಕ ಜತೆಯಾಟವಾಡುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಪೊಲ್ಲಾರ್ಡ್ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಬಾರಿಸಿದರೆ, ಫ್ಯಾಬಿಯನ್ ಅಲೆನ್ 30 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು.

ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 16 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ವಿಂಡೀಸ್‌ ನೀಡಿದ್ದ ಕಠಿಣ ಗುರಿ ನೀಶಮ್-ಸ್ಯಾಂಟ್ನರ್ ಜತೆಯಾಟಕ್ಕೆ ಸವಾಲಾಗಲೇ ಇಲ್ಲ.