* ಮೊದಲ ಟಿ20 ಪಂದ್ಯದಲ್ಲಿ ಕಿವೀಸ್‌ ಬಗ್ಗುಬಡಿದ ಬಾಂಗ್ಲಾದೇಶ* ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 7 ವಿಕೆಟ್‌ಗಳ ಜಯ* ಕಿವೀಸ್ ತಂಡವನ್ನು ಅತಿಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಬಾಂಗ್ಲಾದೇಶ

ಢಾಕಾ(ಸೆ.02): ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನು ಗೆದ್ದ ಬೀಗಿದ್ದ ಬಾಂಗ್ಲಾದೇಶ ಇದೀಗ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನವನ್ನು ಮರುಕಳಿಸುವ ಸೂಚನೆ ನೀಡಿದೆ. ನ್ಯೂಜಿಲೆಂಡ್ ವಿರುದ್ದ ಮೊದಲ ಟಿ20 ಪಂದ್ಯವನ್ನು ಅನಾಯಾಸವಾಗಿ ಗೆಲ್ಲುವಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಯಶಸ್ವಿಯಾಗಿದೆ.

ಹೌದು, ನ್ಯೂಜಿಲೆಂಡ್‌ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಮೊದಲ ಗೆಲುವು ಸಾಧಿಸಿದೆ. ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಕಿವೀಸ್‌ ಪಡೆಯನ್ನು 16.5 ಓವರಲ್ಲಿ 60 ರನ್‌ಗೆ ಆಲೌಟ್‌ ಮಾಡಿದ ಬಾಂಗ್ಲಾದೇಶ, ಸುಲಭ ಗುರಿಯನ್ನು 3 ವಿಕೆಟ್‌ ಕಳೆದುಕೊಂಡು 15 ಓವರಲ್ಲಿ ಬೆನ್ನತ್ತಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. 

Scroll to load tweet…

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್‌ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಿವೀಸ್‌ ಪಡೆ 9 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಟಾಮ್ ಲಾಥಮ್ ಹಾಗೂ ಹೆನ್ರಿ ನಿಕೋಲಸ್‌ ತಲಾ 18 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಬಾಂಗ್ಲಾ ಪರ ಮುಸ್ತಾಫಿಜುರ್‌ ರಹಮಾನ್‌ 3 ವಿಕೆಟ್‌ ಕಬಳಿಸಿದರೆ, ಶಕೀಬ್ ಅಲ್‌ ಹಸನ್, ಸೈಫುದ್ದೀನ್‌, ನಸುಮ್ ಅಹಮದ್ ತಲಾ 2 ವಿಕೆಟ್ ಕಬಳಿಸಿದರು.

ಒಂದೊಳ್ಳೆಯ ಕಾರಣಕ್ಕಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲು ತೀರ್ಮಾನಿಸಿದ ತಮೀಮ್ ಇಕ್ಬಾಲ್‌..!

ಕೇವಲ 60 ರನ್‌ ನ್ಯೂಜಿಲೆಂಡ್‌ ಟಿ20ಯಲ್ಲಿ ದಾಖಲಿಸಿದ ಕನಿಷ್ಠ ಮೊತ್ತವೆನಿಸಿದೆ. 2014ರಲ್ಲಿ ಲಂಕಾ ವಿರುದ್ಧವೂ ಕಿವೀಸ್‌ 60 ರನ್‌ಗೆ ಕುಸಿದಿತ್ತು. 

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಕೂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೇವಲ 7 ರನ್‌ಗಳಿಗೆ ಬಾಂಗ್ಲಾದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು. ಆದರೆ ಆ ಬಳಿಕ ಶಕೀಬ್ ಅಲ್‌ ಹಸನ್‌(25), ಮುಷ್ಫಿಕುರ್ ರಹೀಮ್‌(16*) ಹಾಗೂ ನಾಯಕ ಮೊಹಮ್ಮದುಲ್ಲಾ(14) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.