ಹ್ಯಾಮಿಲ್ಟನ್(ಫೆ.05): ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಹಾಗೂ ಕೆ.ಎಲ್. ರಾಹುಲ್-ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು 347 ರನ್ ಬಾರಿಸಿದೆ. ಈ ಮೂಲಕ ಆತಿಥೇಯ ಕಿವೀಸ್‌ ತಂಡಕ್ಕೆ ಕಠಿಣ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 50 ರನ್‌ಗಳ ಜತೆಯಾಟ ನಿಭಾಯಿಸಿತು. ಪೃಥ್ವಿ ಹಾಗೂ ಮಯಾಂಕ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಪೃಥ್ವಿ 21 ಎಸೆತಗಳಲ್ಲಿ 3 ಬೌಂಡರಿ ಸಹಿತ 20 ರನ್ ಗಳಿಸಿ ಗ್ರಾಂಡ್‌ಹೋಮ್‌ಗೆ ವಿಕೆಟ್ ಒಪ್ಪಿಸಿದರೆ, ಮಯಾಂಕ್ ಅಗರ್‌ವಾಲ್ 31 ಎಸೆತಗಳಲ್ಲಿ 6 ಬೌಂಡರಿ ಸಹಿತ 32 ರನ್‌ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು.

ಕೊಹ್ಲಿ-ಅಯ್ಯರ್ ಜುಗಲ್‌ಬಂದಿ: 52 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಜೋಡಿ ಮೂರನೇ ವಿಕೆಟ್‌ಗೆ 102 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವೇಗದ ರನ್‌ಗಳಿಗೆ ಒತ್ತು ನೀಡಿದ ಈ ಜೋಡಿ ಚೆಂಡನ್ನು ನಾನಾ ಮೂಲೆಗೆ ಬೌಂಡರಿಗಟ್ಟಿದರು. ನಾಯಕ ಕೊಹ್ಲಿ 63 ಎಸೆತಗಳಲ್ಲಿ 6 ಬೌಂಡರಿ ಸಹಿತ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಬಾರಿಸಿದ 58ನೇ ಅರ್ಧಶತಕವಾಗಿದೆ.
 

ರಾಹುಲ್-ಶ್ರೇಯಸ್ ಭರ್ಜರಿ ಬ್ಯಾಟಿಂಗ್:  ವಿರಾಟ್ ವಿಕೆಟ್ ಪತನದ ಬಳಿಕ ಶ್ರೇಯಸ್ ಅಯ್ಯರ್ ಕೂಡಿಕೊಂಡ ಕೆ.ಎಲ್. ರಾಹುಲ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ರನ್ ಗಳಿಕೆಗೆ ಇನ್ನಷ್ಟು ಚುರುಕು ಮುಟ್ಟಿಸಿರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 136 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 290ರ ಗಡಿ ದಾಟಿಸಿದರು. 101 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಚೊಚ್ಚಕ ಶತಕ ಪೂರೈಸಿದರು.  ಶ್ರೇಯಸ್ ಅಯ್ಯರ್ 103 ರನ್ ಗಳಿಸಿ ಸೌಥಿಗೆ ಎರಡನೇ ಬಲಿಯಾದರು. ಶ್ರೇಯಸ್ ಜತೆಗೆ ಮತ್ತೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆ.ಎಲ್. ಮತ್ತೊಂದು ಅದ್ಭುತ ಇನಿಂಗ್ಸ್ ಕಟ್ಟಿದರು. ಟಿ20 ಸರಣಿಯಲ್ಲಿ ಗರಿಷ್ಠ ರನ್ ಕಲೆಹಾಕಿ ದಾಖಲೆ ಬರೆದಿದ್ದ ರಾಹುಲ್, ಅದೇ ಫಾರ್ಮ್‌ ಅನ್ನು ಏಕದಿನ ಸರಣಿಯಲ್ಲೂ ಮುಂದುವರೆಸಿದರು. 64 ಎಸೆತಗಳಲ್ಲಿ ರಾಹುಲ್ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 88 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಕೇದಾರ್ ಜಾಧವ್ 26 ರನ್ ಗಳಿಸಿ ಅಜೇಯರಾಗುಳಿದರು. 

ಕಿವೀಸ್ ಪರ ಟಿಮ್ ಸೌಥಿ ಎರಡು ವಿಕೆಟ್ ಪಡೆದರಾದರೂ 10 ಓವರ್‌ನಲ್ಲಿ 85 ರನ್ ನೀಡಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 20 ರನ್ ನೀಡಿ ದುಬಾರಿ ಎನಿಸಿದರು. ಇನ್ನು ಬೆನೆಟ್ ಸಹಾ 77 ರನ್ ನೀಡುವ ಮೂಲಕ ದುಬಾರಿ ಎನಿಸಿದರು.