ಹ್ಯಾಮಿಲ್ಟನ್(ಫೆ.05): ನ್ಯೂಜಿಲೆಂಡ್ ವಿರುದ್ಧ 5 ಟಿ20 ಪಂದ್ಯ ಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಸಾಧಿಸಿರುವ ಟೀಂ ಇಂಡಿಯಾ ಬುಧವಾರ ಇಲ್ಲಿನ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಯಶಸ್ಸು ಗಳಿಸಿ ಶುಭಾರಂಭದ ವಿಶ್ವಾಸದಲ್ಲಿದೆ. 

3 ಏಕದಿನ ಪಂದ್ಯಗಳ ಸರಣಿ ಬುಧವಾರದಿಂದ ಆರಂಭವಾಗಲಿದೆ. ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಇದು 3ನೇ ಏಕದಿನ ಸರಣಿಯಾಗಿದೆ. ಹಿಂದಿನ 2 ಸರಣಿಯಲ್ಲಿ ಭಾರತ ಗೆದ್ದಿದ್ದು, ಮತ್ತೊಂದು ಜಯದ ವಿಶ್ವಾಸದಲ್ಲಿ ಕೊಹ್ಲಿ ಪಡೆ ಇದೆ. ಆತಿಥೇಯ ನ್ಯೂಜಿಲೆಂಡ್ ಸರಣಿ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದೆ. ಟಿ20 ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಆತಿಥೇಯ ನ್ಯೂಜಿಲೆಂಡ್, ಏಕದಿನ ಕ್ರಿಕೆಟ್‌ನಲ್ಲಿ ತಿರುಗೇಟು ನೀಡುವ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ. ಆದರೆ ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮೊದಲ ಒನ್ ಡೇ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಬಲಾಢ್ಯ ಬ್ಯಾಟಿಂಗ್ ಪಡೆ: ಭಾರತ ತಂಡದ ಅಂತಿಮ 11ರ ಬಳಗದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಕನ್ನಡದ ಮಯಾಂಕ್ ಅಗರ್‌ವಾಲ್ ಏಕದಿನ ತಂಡ ದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಮಯಾಂಕ್ ಅವರೊಂದಿಗೆ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಮತ್ತೊಬ್ಬ ಆರಂಭಿಕ ಕೆ.ಎಲ್. ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇದೆ. ಹಾಗೇ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ನಾಯಕ ಕೊಹ್ಲಿ ಎಂದಿನಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯ ಲಿದ್ದು, ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.  ವೇಗಿಗಳ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ಟಿ೨೦ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಎನಿಸಿದ್ದರು.

ಅನುಭವಿ ಬೌಲರ್‌ಗಳ ಕೊರತೆ: ಕೇನ್ ವಿಲಿಯಮ್ಸನ್ ಗೈರು ಹಾಜರಿಯಲ್ಲಿ ಟಾಮ್ ಲೇಥಮ್ ಏಕದಿನ ತಂಡ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಜೇಮ್ಸ್ ನಿಶಾಮ್, ಗ್ರಾಂಡ್‌ಹೋಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅತಿ ಎತ್ತರದ ಆಟಗಾರ ಕೈಲ್ ಜ್ಯಾಮಿಸನ್ ಕಿವೀಸ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.