Asianet Suvarna News Asianet Suvarna News

ಒಂದೇ ದಿನ 407 ರನ್ ಚಚ್ಚಿದ ಸಾಗರದ ಹುಡುಗ ತನ್ಮಯ್; ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ

ಜಿಲ್ಲಾಮಟ್ಟದ ಅಂಡರ್ 16 ಟೂರ್ನಿಯ ಏಕದಿನ ಪಂದ್ಯದಲ್ಲಿ 407 ರನ್ ಚಚ್ಚಿದ ತನ್ಮಯ್ ಮಂಜುನಾಥ್
ತನ್ಮಯ್ ಮಂಜುನಾಥ್ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡದ ಆಟಗಾರ
ಭದ್ರಾವತಿಯ ಎ.ಟಿ.ಸಿ.ಸಿ ತಂಡದ ಎದುರು ತನ್ಮಯ್ ಸ್ಪೋಟಕ ಬ್ಯಾಟಿಂಗ್

16 Year Old Thanmay Scored 407 runs in KSCA Under 16 District level Zonal match in Shivamogga kvn
Author
First Published Nov 13, 2022, 10:55 AM IST

ಶಿವಮೊಗ್ಗ(ನ.13): ನಿರಂತರ ಪರಿಶ್ರಮ ಹಾಗೂ ಪ್ರತಿಭೆ ಜತೆಗಿದ್ದರೇ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸಾಗರದ 15 ವರ್ಷದ ಯುವ ಕ್ರಿಕೆಟ್‌ ಪ್ರತಿಭೆ ತನ್ಮಯ್ ಮಂಜುನಾಥ್ ಅವರೇ ಸಾಕ್ಷಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತನ್ಮಯ್ ಮಂಜುನಾಥ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 16 ವರ್ಷದೊಳಗಿನವರ  ಶಿವಮೊಗ್ಗ ವಲಯದ ಜಿಲ್ಲಾಮಟ್ಟದ ಇಂಟರ್ ಕ್ಲಬ್ ಕ್ರಿಕೆಟ್‌ ಪಂದ್ಯವೊಂದರಲ್ಲಿ ಒಂದೇ ದಿನ ಬರೋಬ್ಬರಿ 407 ರನ್ ಸಿಡಿಸುವ ಮೂಲಕ ರಾಜ್ಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ

ಹೌದು, ಇಲ್ಲಿನ ಪೆಸಿಟ್‌ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಸಾಗರ ಹಾಗೂ ಭದ್ರಾವತಿಯ ಎ.ಟಿ.ಸಿ.ಸಿ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡವು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಮೊದಲ ವಿಕೆಟ್‌ಗೆ ತನ್ಮಯ್ ಮಂಜುನಾಥ್ ಹಾಗೂ ಅಂಶು ಸಾಗರ್ 350 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟರು. ಅಂಶು 127 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ತನ್ಮಯ್ ಕೇವಲ 165 ಎಸೆತಗಳಲ್ಲಿ 48 ಬೌಂಡರಿ ಹಾಗೂ 24 ಆಕರ್ಷಕ ಸಿಕ್ಸರ್‌ಗಳ ಸಹಿತ ದಾಖಲೆಯ 407 ರನ್ ಸಿಡಿಸುವಲ್ಲಿ ಯಶಸ್ವಿಯಾದರು. ಆರಂಭಿಕನಾಗಿ ಕಣಕ್ಕಿಳಿದು 50ನೇ ಓವರ್(49.3 ಓವರ್)ವರೆಗೂ ಬ್ಯಾಟ್ ಬೀಸಿದ ತನ್ಮಯ್ ಅವರ ಪ್ರದರ್ಶನದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಂತಿಮವಾಗಿ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡವು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 583 ರನ್ ಕಲೆಹಾಕಿತು. 

ಇನ್ನು ಸವಾಲಿನ ಗುರಿ ಬೆನ್ನತ್ತಿದ ಭದ್ರಾವತಿಯ ಎ.ಟಿ.ಸಿ.ಸಿ ತಂಡವು ಅಂಶು ಸಾಗರ್ ಹಾಗೂ ಅಜಿತ್ ಎಂ ಸಿ ಮಾರಕ ದಾಳಿಗೆ ತತ್ತರಿಸಿ ಕೇವಲ 73 ರನ್‌ಗಳಿಗೆ ಸರ್ವಪತನ ಕಂಡಿತು. ಬ್ಯಾಟಿಂಗ್‌ನಲ್ಲಿ ಶತಕ ಸಿಡಿಸಿದ್ದ ಅಂಶು ಬೌಲಿಂಗ್‌ನಲ್ಲಿ ಕೇವಲ 17 ರನ್ ನೀಡಿ 5 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಅಜಿತ್ ಎಂ ಸಿ ಕೂಡಾ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡವು 510 ರನ್‌ಗಳ ಅಂತರದ ಗೆಲುವು ದಾಖಲಿಸಿ ಬೀಗಿದೆ. 

ಕೋವಿಡ್‌ನಿಂದಾಗಿ ರಾಜ್ಯ ತಂಡ ಪ್ರತಿನಿಧಿಸುವ ಅವಕಾಶ ಮಿಸ್: ಹೌದು ಕಳೆದ ವರ್ಷ, ತನ್ಮಯ್ ಮಂಜುನಾಥ್ 16 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಕೋವಿಡ್‌ ಕಾರಣದಿಂದಾಗಿ ಕೆಎಸ್‌ಸಿಎ 16 ವರ್ಷದ ವಯೋಮಿತಿಯ ಕ್ರಿಕೆಟ್ ಟೂರ್ನಿ ರದ್ದಾಗಿತ್ತು. ಹೀಗಾಗಿ ಕಳೆದ ವರ್ಷವೇ ತನ್ಮಯ್ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ತಪ್ಪಿಸಿಕೊಂಡಿದ್ದರು. ಆದರೆ ಅಷ್ಟಕ್ಕೆ ಸುಮ್ಮನಾಗದ ತನ್ಮಯ್, ಇದೀಗ ತಮ್ಮ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ತನ್ಮಯ್ ಮಂಜುನಾಥ್ ಅವರ ಪ್ರದರ್ಶನದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಂ ಜತೆ ಮಾತನಾಡಿದ ಕೋಚ್ ಹಾಗೂ ನಾಗೇಂದ್ರ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ, ನಾಗೇಂದ್ರ ಪಂಡಿತ್, 'ತನ್ಮಯ್ ಅತ್ಯುತ್ತಮ ಪ್ರದರ್ಶನ ತೋರಿದರು. ನನ್ನ ಪ್ರಕಾರ ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಯಾವುದೇ ವಯೋಮಾನದಲ್ಲಿ ಒಂದೇ ದಿನ ಯಾವ ಆಟಗಾರನೂ ಇದುವರೆಗೂ 400+ ರನ್‌ ಬಾರಿಸಿಲ್ಲ. ತನ್ಮಯ್‌ಗೆ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವಿದೆ' ಎಂದು ಹೇಳಿದ್ದಾರೆ.

Follow Us:
Download App:
  • android
  • ios