ಪಾಕಿಸ್ತಾನ, ನ್ಯೂಜಿಲೆಂಡ್ ಸೇರಿ 2026ರ ಟಿ20 ವಿಶ್ವಕಪ್‌ಗೆ 12 ತಂಡಗಳಿಗೆ ನೇರ ಅರ್ಹತೆ..!
ಭಾರತ ಹಾಗೂ ಶ್ರೀಲಂಕಾ ಆತಿಥೇಯ ರಾಷ್ಟ್ರಗಳಾಗಿ ಅರ್ಹತೆ ಪಡೆದರೆ, ಸೂಪರ್-8ಗೆ ಪ್ರವೇಶಿಸಿರುವ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಅಮೆರಿಕ ಪ್ರವೇಶ ಪಡೆದಿವೆ. ಇನ್ನು ಐಸಿಸಿ ಟಿ20 ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-12 ಸ್ಥಾನಗಳಲ್ಲಿ ಇರುವ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿಗೂ ನೇರ ಪ್ರವೇಶ ಸಿಕ್ಕಿದೆ.
ದುಬೈ: 2026ರಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 12 ತಂಡಗಳು ನೇರ ಅರ್ಹತೆ ಪಡೆದಿವೆ. 2024ರ ವಿಶ್ವಕಪ್‌ನ ಸೂಪರ್-8 ಹಂತಕ್ಕೇರಿದ ತಂಡಗಳು ಅಂತಿಮವಾದ ಬೆನ್ನಲ್ಲೇ, 2026ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ ತಂಡಗಳು ಪ್ರಕಟಗೊಂಡಿವೆ.
ಭಾರತ ಹಾಗೂ ಶ್ರೀಲಂಕಾ ಆತಿಥೇಯ ರಾಷ್ಟ್ರಗಳಾಗಿ ಅರ್ಹತೆ ಪಡೆದರೆ, ಸೂಪರ್-8ಗೆ ಪ್ರವೇಶಿಸಿರುವ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಅಮೆರಿಕ ಪ್ರವೇಶ ಪಡೆದಿವೆ. ಇನ್ನು ಐಸಿಸಿ ಟಿ20 ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-12 ಸ್ಥಾನಗಳಲ್ಲಿ ಇರುವ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳಿಗೂ ನೇರ ಪ್ರವೇಶ ಸಿಕ್ಕಿದೆ. ಉಳಿದ 8 ತಂಡಗಳು ಯಾವುವು ಎನ್ನುವುದು ಅರ್ಹತಾ ಟೂರ್ನಿಗಳ ಮೂಲಕ ನಿರ್ಧಾರವಾಗಲಿದೆ.
ಕೊನೆ ಪಂದ್ಯದಲ್ಲಿ ಅಬ್ಬರಿಸಿ ಜಯದೊಂದಿಗೆ ಲಂಕಾ ಗುಡ್‌ಬೈ
ಗ್ರಾಸ್ ಐಲೆಟ್: ಬೇಕಿದ್ದ ಪಂದ್ಯಗಳಲ್ಲಿ ಸಾಹಸ ತೋರದೆ ಟಿ20 ವಿಶ್ವಕಪ್‌ನ ಸೂಪರ್-8 ಹಂತಕ್ಕೆ ಪ್ರವೇಶಿಸಲು ವಿಫಲವಾದ ಶ್ರೀಲಂಕಾ, ಗುಂಪು ಹಂತದಲ್ಲಿ ತನ್ನ ಕೊನೆಯ, ಔಪಚಾರಿಕ ಪಂದ್ಯದಲ್ಲಿ ನೆದರ್‌ಲೆಂಡ್ಸ್ ತಂಡವನ್ನು 83 ರನ್‌ಗಳಿಂದ ಬಗ್ಗುಬಡಿಯಿತು. ಮೊದಲು ಬ್ಯಾಟ್ ಮಾಡಿ 20 ಓವರಲ್ಲಿ 6 ವಿಕೆಟ್‌ಗೆ 201 ರನ್‌ಗಳ ಬೃಹತ್ ಮೊತ್ತ ಪೇರಿಸಿದ ಲಂಕಾ, ನೆದರ್‌ಲೆಂಡ್ಸ್ ಅನ್ನು 16.4 ಓವರಲ್ಲಿ 118 ರನ್‌ಗೆ ಆಲೌಟ್ ಮಾಡಿತು.
ಸ್ಕೋರ್: ಲಂಕಾ 20 ಓವರಲ್ಲಿ 201/6 (ಅಸಲಂಕ 46, ಕುಸಾಲ್ 46, ಮ್ಯಾಥ್ಯೂಸ್ 30*, ವಾನ್ ಬೀಕ್ 2-45), ನೆದರ್‌ಲೆಂಡ್ಸ್ 16.4 ಓವರಲ್ಲಿ 118/10 (ಲೆವಿಟ್ಟ್ 31, ಎಡ್ವರ್ಡ್ಸ್ 31, ತುಷಾರ 3-24)
ಪಾಕ್‌ನಂಥ ಕೆಟ್ಟ ಟೀಂ ನಾನು ನೋಡಿಲ್ಲ ಎಂದ ಕೋಚ್ ಕರ್ಸ್ಟನ್: ವರದಿ
ನವದೆಹಲಿ: ಟಿ20 ವಿಶ್ವಕಪ್‌ನ ಸೂಪರ್-8 ಹಂತಕ್ಕೆ ಪ್ರವೇಶಿಸಲು ವಿಫಲವಾದ ಪಾಕಿಸ್ತಾನ ತಂಡದ ವಿರುದ್ಧ ಪ್ರಧಾನ ಕೋಚ್ ಗ್ಯಾರಿ ಕರ್ಸ್ಟನ್ ಕೆಂಡಾಮಂಡಲಗೊಂಡಿದ್ದಾರೆ ಎನ್ನಲಾಗಿದ್ದು, ‘ಇಂತಹ ಕೆಟ್ಟ ತಂಡವನ್ನೇ ನಾನು ನೋಡಿಲ್ಲ’ ಎಂದಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
‘ತಂಡದಲ್ಲಿ ಒಗ್ಗಟ್ಟಿಲ್ಲ. ಇದೊಂದು ತಂಡ ಎಂದು ಅವರು ಕರೆದುಕೊಳ್ಳುತ್ತಾರೆ, ಅದರೆ ಒಂದು ತಂಡಕ್ಕೆ ಬೇಕಿರುವ ಯಾವ ಗುಣಗಳೂ ಇಲ್ಲ. ಆಟಗಾರರ ನಡುವೆ ಉತ್ತಮ ಸಂಬಂಧವಿಲ್ಲ. ಒಬ್ಬೊಬ್ಬರದ್ದು ಒಂದೊಂದು ಕಥೆ. ನಾನು ಸಾಕಷ್ಟು ತಂಡಗಳ ಜೊತೆ ಕೆಲಸ ಮಾಡಿದ್ದು, ಇಂಥ ತಂಡವನ್ನು ಎಲ್ಲೂ ನೋಡಿಲ್ಲ’ ಎಂದು ಕರ್ಸ್ಟನ್ ಮಾಧ್ಯಮವೊಂದರ ಪ್ರತಿನಿಧಿ ಜೊತೆ ಮಾತನಾಡುವಾಗ ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಕೆಲ ಪಾಕಿಸ್ತಾನಿ ಮಾಧ್ಯಮಗಳು ಕರ್ಸ್ಟನ್‌ರನ್ನು ಸಂಪರ್ಕಿಸಿ ಈ ಕುರಿತು ಪ್ರತಿಕ್ರಿಯೆ ಕೇಳಿರುವುದಾಗಿಯೂ ಹೇಳಿಕೊಳ್ಳುತ್ತಿದ್ದು, ತಾವು ತಂಡದ ವಿರುದ್ಧ ಯಾವ ಹೇಳಿಕೆಯನ್ನೂ ನೀಡಿಲ್ಲ ಎಂದು ಕರ್ಸ್ಟನ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿವೆ.