ರಾಜ್ಯದೆಲ್ಲೆಡೆ ಆಕ್ಸಿಜನ್ ಬೆಡ್ ಹೆಚ್ಚಳ: ಸಿಎಂ ಬಸವರಾಜ್ ಬೊಮ್ಮಾಯಿ
* ಕೊರೋನಾ ಮೂರನೇ ಅಲೆ ಎದುರಿಸಲು ಕರ್ನಾಟಕ ರಾಜ್ಯ ಸರ್ಕಾರ ಸಿದ್ದ
* ಪ್ರತಿ ಜಿಲ್ಲಾಸ್ಪತ್ರೆ ಮತ್ತು 100ಕ್ಕಿಂತ ಅಧಿಕ ಬೆಡ್ ಇರುವ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು ವಿಭಾಗ ತೆರೆಯಲು ಚಿಂತನೆ
* ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ
ಮಂಗಳೂರು(ಆ.13): ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆ ಮತ್ತು 100ಕ್ಕಿಂತ ಅಧಿಕ ಬೆಡ್ ಇರುವ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು ವಿಭಾಗ ತೆರೆಯಲಾಗುವುದು. ಎಲ್ಲ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು ಹಾಗೂ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು ಮಂಗಳೂರಿನ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಕೋವಿಡ್ ನಿಯಂತ್ರಣ ಕುರಿತ ಸಭೆ ನಡೆಸಿ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಈ ವಿಚಾರ ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು, ಐಸಿಯು, ಆಕ್ಸಿಜನ್ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಕೊರೋನಾದಿಂದ ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಆರೋಗ್ಯ ಇಲಾಖೆ ಸನ್ನದ್ಧವಾಗಿರಬೇಕಿದ್ದು, ಸೌಲಭ್ಯ ಹೆಚ್ಚಿಸುವ ಕಾರ್ಯಕ್ಕೆ ಇನ್ನಷ್ಟುವೇಗ ನೀಡಲಾಗುವುದು ಎಂದರು.
ಡಿಎಚ್‌ಒ, ಡಿಸಿಗೆ ತರಾಟೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್-95 ಮಾಸ್ಕ್ ಕೊರತೆ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರನ್ನು ಮುಖ್ಯಮಂತ್ರಿ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ನಡೆಯಿತು.
ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಗ್ಲೌಸ್ ಕೊರತೆ ಇದೆ ಎಂಬ ವಿಚಾರ ಗಮನಕ್ಕೆ ಬಂತು. ಇದಕ್ಕೆ ಗರಂ ಆದ ಬೊಮ್ಮಾಯಿ, ಗ್ಲೌಸ್ ಇಲ್ಲದೆ ಏನು ಆಡಳಿತ ಮಾಡ್ತೀರಾ? ಡಿಆರ್‌ಎಫ್ ಫಂಡ್ ಇದ್ದು ತಕ್ಷಣ ಖರೀದಿ ಮಾಡಿ. ಸಂಜೆ ನನಗೆ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದೇ ವೇಳೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ‘ಏನಯ್ಯ ನೀನು ಏನ್ ಮಾಡ್ತಿದ್ದೀಯಾ? ನಿನ್ನ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದು ಗೊತ್ತಿಲ್ಲವೇ? ಮೋಸ್ಟ್ ಸೀನಿಯರ್ ಆಫೀಸರ್ ಆಗಿದ್ದರೂ ನಿದ್ದೆ ಮಾಡ್ತಾ ಇದ್ದೀಯಾ? ಮಾಸ್ಕ್, ಗ್ಲಾಸ್ ಎಷ್ಟುಕೊರತೆ ಇದೆ ಎನ್ನುವ ಲೆಕ್ಕ ಕೊಡೋಕೆ ಆಗಲ್ವಾ?’ ಎಂದು ಕ್ಲಾಸ್ ತೆಗೆದುಕೊಂಡರು.
ಸಿಎಂ ವಿರುದ್ಧ ಪ್ರತಿಭಟನೆ: ಇದಕ್ಕೂ ಮೊದಲು ಮಂಗಳೂರಿನ ಉರ್ವಸ್ಟೋರ್ ಬಳಿ .1,782ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಅಂಬೇಡ್ಕರ್ ಭವನವನ್ನು ಮುಖ್ಯಮಂತ್ರಿ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದು, ಈ ವೇಳೆ ಅವರು ಒಂದು ಮಾತೂ ಆಡದೆ ಮುಂದಿನ ಕಾರ್ಯಕ್ರಮಕ್ಕೆ ಹೊರಟಿದ್ದು ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಟಾಚಾರಕ್ಕೆಂಬಂತೆ ಉದ್ಘಾಟನೆ ನಡೆದಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿ, ಘೋಷಣೆ ಕೂಗಿದ ಘಟನೆಯೂ ನಡೆಯಿತು.