ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರೇ ಇಲ್ಲ..!
ಡಿಸೆಂಬರ್ ಮಧ್ಯ ಭಾಗದಿಂದ ವಿದೇಶದಲ್ಲಿ ಸೋಂಕು ಭಾರೀ ಹೆಚ್ಚಳ ಹಿನ್ನೆಲೆ ಭಾರತದಲ್ಲಿಯೂ ಸೋಂಕು ವ್ಯಾಪಿಸಬಹುದು. ಅದರಲ್ಲಿಯೂ ವಿದೇಶಗಳೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುವ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಆರ್ಭಟಿಸಬಹುದು ಎಂಬ ಆತಂಕ.
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಡಿ.29): ಕಳೆದ ವರ್ಷ ಇದೇ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪ್ರಕರಣಗಳನ್ನು ಸದ್ಯಕ್ಕೆ ಹೋಲಿಸಿದರೆ ಇಪ್ಪತ್ತು ಪಟ್ಟು ಹೆಚ್ಚಿದ್ದವು. ಅದರಲ್ಲೂ, ಜನವರಿಯಲ್ಲಿ 50 ಸಾವಿರ ಗಡಿ ದಾಟಿದ್ದವು. ಆದರೆ, ಪ್ರಸಕ್ತ ವಾರದ ಸರಾಸರಿ ಹೊಸ ಪ್ರಕರಣಗಳು 18 ಆಸುಪಾಸಿನಲ್ಲಿಯೇ ಇದ್ದು, ಒಬ್ಬ ಕೊರೋನಾ ಸೋಂಕಿತ ಕೂಡಾ ಆಸ್ಪತ್ರೆಗೆ ದಾಖಲಾಗಿಲ್ಲ!
ಡಿಸೆಂಬರ್ ಮಧ್ಯ ಭಾಗದಿಂದ ವಿದೇಶದಲ್ಲಿ ಸೋಂಕು ಭಾರೀ ಹೆಚ್ಚಳ ಹಿನ್ನೆಲೆ ಭಾರತದಲ್ಲಿಯೂ ಸೋಂಕು ವ್ಯಾಪಿಸಬಹುದು. ಅದರಲ್ಲಿಯೂ ವಿದೇಶಗಳೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುವ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಆರ್ಭಟಿಸಬಹುದು ಎಂಬ ಆತಂಕವಿದೆ. ಆದರೆ, ಡಿಸೆಂಬರ್ 21ರಿಂದ 27ವರೆಗೂ 129 ಮಂದಿಗೆ ಸೋಂಕು ತಗುಲಿದೆ. ಅಂದರೆ, ಪರೀಕ್ಷಿತರಲ್ಲಿ ಶೇ.18 ಮಂದಿಗೆ ಸೋಂಕು ತಗುಲಿದೆ. ಯಾವುದೇ ಸಾವು ಕೂಡಾ ವರದಿಯಾಗಿಲ್ಲ. ಇನ್ನು ಕಳೆದ ವರ್ಷ (2021) ಡಿಸೆಂಬರ್ ನಾಲ್ಕನೇ ವಾರ ಸರಾಸರಿ 360 ಮಂದಿಗೆ (20 ಪಟ್ಟು ಅಧಿಕ) ಸೋಂಕು ಹೊಸ ಪ್ರಕರಣಗಳು ವರದಿಯಾಗಿದ್ದವು.
ಮುಂದಿನ 40 ದಿನದಲ್ಲಿ ಕೋವಿಡ್ ಸ್ಫೋಟ, ಅಪಾಯದ ತೀವ್ರತೆ ಕಡಿಮೆ; ಆರೋಗ್ಯ ಸಚಿವಾಲಯದ ಎಚ್ಚರಿಕೆ!
ಸದ್ಯ ರಾಜ್ಯದ ಒಟ್ಟಾರೆ ಸಕ್ರಿಯ ಸೋಂಕಿತ 1,248 ಮಂದಿ ಪೈಕಿ 1,209 (ಶೇ.97) ಮಂದಿ ಬೆಂಗಳೂರಿನಲ್ಲಿಯೇ ಇದ್ದಾರೆ. 1209 ಸೋಂಕಿತರದಲ್ಲಿ ಯಾವುದೇ ಒಬ್ಬ ರೋಗಿಯೂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿಲ್ಲ. ಎಲ್ಲರೂ ಮನೆಯಲ್ಲಿಯೇ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಒಟ್ಟಾರೆ ರಾಜ್ಯದಲ್ಲಿಯೂ ನಾಲ್ಕು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಸೋಂಕು ಹೆಚ್ಚು ಗಂಭೀರವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ತಿಂಗಳಲ್ಲಿ ಇಬ್ಬರು ಸಾವು
ಕೊರೋನಾ ಸೋಂಕಿತರ ಸಾವು ಕೂಡಾ ಸಂಪೂರ್ಣ ಹತೋಟಿಯಲ್ಲಿದ್ದು, ಡಿಸೆಂಬರ್ 14ರ ಬಳಿಕ ಒಬ್ಬರೇ ಒಬ್ಬ ಸೋಂಕಿತರ ಸಾವು ಕೂಡಾ ಆಗಿಲ್ಲ. ಅಲ್ಲದೆ, ಕಳೆದ ಒಂದು ತಿಂಗಳಲ್ಲಿ (ನ.27ರಿಂದ ಡಿ.27ವರೆಗೂ) ಇಬ್ಬರ ಸೋಂಕಿತರ ಸಾವಾಗಿದ್ದು, ಇಬ್ಬರೂ 80 ವರ್ಷದ ವಯೋವೃದ್ಧರಾಗಿದ್ದು, ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಎಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ತಿಳಿಸಲಾಗಿದೆ.
ಕೊರೋನಾ ಬಗ್ಗೆ ಸರ್ಕಾರ ಎಚ್ಚರ ವಹಿಸಿದೆ: ಸಚಿವ ಸುಧಾಕರ
ಆತಂಕದ ಪಡಬೇಕಿಲ್ಲ: ತಜ್ಞರು
ವಿದೇಶದಲ್ಲಿ ಹೆಚ್ಚಳವಾಗಿ ಆತಂಕ ಮೂಡಿಸಿರುವ ಕೊರೋನಾ ಸೋಂಕಿನ ಬಿ.ಎಫ್-7 ರೂಪಾಂತರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ವರದಿಯಾಗಿತ್ತು. ಆದರೆ, ಹೆಚ್ಚು ವ್ಯಾಪಿಸಲಿಲ್ಲ. ಕರ್ನಾಟಕದಲ್ಲಿ ಇದುವರೆಗೂ ಹೊಸ ರೂಪಾಂತರಿ ಪತ್ತೆಯಾಗಿಲ್ಲ. ರಾಜ್ಯದ ಆಸ್ಪತ್ರೆ ದಾಖಲಾತಿಗಳು ಹೆಚ್ಚಿಲ್ಲ, ಸೋಂಕು ಪ್ರಕರಣಗಳು, ಸಾವು ಕೂಡಾ ನಿಯಂತ್ರಣ ಪಟ್ಟದಲ್ಲಿವೆ. ಈ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೋಂಕು ಸದ್ಯ ಸಂಪೂರ್ಣ ಹತೋಟಿಯಲ್ಲಿಯೇ ಇದೆ. ಆತಂಕ ಪಡುವ ವಾತಾವರಣ ಇಲ್ಲ, ಭಯಬೇಡ ಎನ್ನುತ್ತಾರೆ ಕೊರೋನಾ ಸೋಂಕು ನಿರ್ವಹಣಾ ತಜ್ಞರು.
ವರ್ಷಾಚರಣೆಯಲ್ಲಿ ಎಚ್ಚರ ತಪ್ಪಬೇಡಿ
ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಮಾಲ್, ರೆಸ್ಟೋರೆಂಟ್, ಹೋಟೆಲ್‌ಗಳ ಪಾರ್ಟಿ, ಸಭೆ ಸಮಾರಂಭಗಳಲ್ಲಿ ಜನ ದಟ್ಟಣೆ ಇರುತ್ತದೆ. ಜತೆಗೆ ವರ್ಷಾಂತ್ಯದ ಪ್ರವಾಸ ಪ್ರವೃತ್ತಿಯಿಂದ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್‌್ಕ ಧರಿಸುವುದರಿಂದ ಕೊರೋನಾ ಸೇರಿದಂತೆ ಇತರೆ ವೈರಲ್ ಜ್ವರಗಳು ಕೂಡಾ ಹರಡುವುದಿಲ್ಲ. ಸೋಂಕು ಹೆಚ್ಚಿರುವ ದೇಶಗಳಿಂದ ಆಗಮಿಸಿದವರು ಹಾಗೂ ಜನದಟ್ಟಣೆ ಪ್ರದೇಶದಿಂದ ಬಂದವರೊಡನೆ ಮನೆಯ ವಯೋವೃದ್ಧರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು, ಮಕ್ಕಳನ್ನು ದೂರವಿಡಬೇಕು. ತೀವ್ರ ಉಸಿರಾಟ ಸಮಸ್ಯೆ, ಕೆಮ್ಮು ಕಾಣಿಸಿಕೊಂಡರೆ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.