ಸೋಲ್(ಮಾ.27)‌: 2019ರ ಅಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್‌ ಪ್ರಸ್ತಾಪವುಳ್ಳ ಸರಣಿ ಚಲನಚಿತ್ರವೊಂದು 2018ರಲ್ಲಿ ಕೊರಿಯಾದಲ್ಲಿ ಸಿದ್ಧಗೊಂಡಿತ್ತು. ಅದರಲ್ಲಿ ಕೊರೋನಾ ಅಪಾಯಗಳ ಬಗ್ಗೆ ವಿವರಿಸಲಾಗಿತ್ತು ಎಂಬ ಅಚ್ಚರಿಯ ಸಂಗತಿ ಇದೀಗ ಕೊರಿಯಾ ಹೊರತಾದ ಬಾಹ್ಯ ಜಗತ್ತಿಗೆ ತಿಳಿದುಬಂದಿದೆ.

ಅಬ್ಬಬ್ಬಾ..! ಕೊರೋನಾ ಸೋಂಕು, ಚೀನಾವನ್ನು ಹಿಂದಿಕ್ಕಿದ ಅಮೆರಿಕಾ..!

ಚಲನಚಿತ್ರಗಳು ಪ್ರಸಾರವಾಗುವ ವೆಬ್‌ ತಾಣವಾಗಿರುವ ‘ನೆಟ್‌ಫ್ಲಿಕ್ಸ್‌’ನಲ್ಲಿ ‘ಮೈ ಸೀಕ್ರೆಟ್‌ ಟೆರಿಯಸ್‌’ ಸರಣಿಯು ಪ್ರಸಾರಗೊಂಡಿತ್ತು. ಆದರೆ ಚಿತ್ರ ವೈರಲ್‌ ಆಗುತ್ತಿದ್ದಂತೆಯೇ ನೆಟ್‌ಫ್ಲಿಕ್ಸ್‌ನಿಂದ ಮಾಯವಾಗಿದೆ ಎಂದು ವೀಕ್ಷಕರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ.

ಚಿತ್ರದಲ್ಲೇನಿದೆ?:

ಚಿತ್ರದ ಒಂದು ದೃಶ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಗೆ ‘ಮನೆಯಲ್ಲೇ ಇರು. ಹೊರಗೆ ಹೋಗಬೇಡ’ ಎನ್ನುತ್ತಾನೆ. ಆಗ ಆಸ್ಪತ್ರೆಯ ದೃಶ್ಯವೊಂದು ಪ್ರಸಾರವಾಗುತ್ತದೆ. ಅದರಲ್ಲಿ ವೈದ್ಯರೊಬ್ಬರು ಮಹಿಳಾ ರೋಗಿಯೊಬ್ಬಳಿಗೆ ಕೊರೋನಾ ವೈರಸ್‌ ಬಗ್ಗೆ ವಿವರಿಸುತ್ತಾರೆ. ‘ಅದರಿಂದ ಶ್ವಾಸಕೋಶಕ್ಕೇ ಸಮಸ್ಯೆಯಾಗುತ್ತದೆ. ಇದು ಸಾರ್ಸ್‌, ಮರ್ಸ್‌, ಫ್ಲ್ಯೂ ರೀತಿಯ ವೈರಸ್‌’ ಎಂದು ಹೇಳುತ್ತಾರೆ.

‘ಇದರ ಮರಣಪ್ರಮಾಣ ಶೇ.90ರಷ್ಟು. ದೇಹದಲ್ಲಿ ವೈರಸ್‌ 2ರಿಂದ 14 ದಿನ ಇರುತ್ತದೆ. ಆದರೆ ಈಗ ವೈರಸ್‌ ದೇಹ ಪ್ರವೇಶಿಸಿದ 5 ನಿಮಿಷದಲ್ಲಿ ಶ್ವಾಸಕೋಶದ ಮೇಲೆ ದಾಳಿ ಮಾಡಬಲ್ಲದು’ ಎಂದೂ ವೈದ್ಯರು ವಿವರಿಸುತ್ತಾರೆ. ‘ಇದಕ್ಕೇನು ಪರಿಹಾರ?’ ಎಂದು ಆ ಮಹಿಳೆ ಕೇಳಿದಾಗ, ‘ಇಲ್ಲ. ಇದಕ್ಕೆ ಈಗ ಯಾವುದೇ ಲಸಿಕೆ ಇಲ್ಲ. ಲಸಿಕೆ ಸಂಶೋಧನೆ ಕಠಿಣವಾದುದು’ ಎಂದೂ ಹೇಳುತ್ತಾರೆ ವೈದ್ಯ.