ನವದೆಹಲಿ(ಏ.10): ಕೊರೋನಾ ವೈರಸ್ ವಿರುದ್ದ ಸೆಣಸುತ್ತಿರುವ ಕಾರಣ ರಾಷ್ಟ್ರೀಯ ಮತ್ತು ರಾಜ್ಯಗಳ ಆರೋಗ್ಯ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಿಂದ 15,000 ಕೋಟಿ ರುಪಾಯಿ ಮೊತ್ತದ ತುರ್ತು ಆರೋಗ್ಯ ಪ್ಯಾಕೇಜ್‌ವೊಂದನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ.

ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ  ಸಿದ್ದತೆ ಪ್ಯಾಕೇಜ್ ಇದಾಗಿದ್ದು, ಈ ಯೋಜನೆಗೆ ತಗುಲುವ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಈ ಹಣವನ್ನು ವಿನಿಯೋಗಿಸುವಂತೆ ಎಲ್ಲ ರಾಜ್ಯ ಸರ್ಕಾರಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಸೂಚನೆ ನೀಡಿದೆ.

ಕೊರೋನಾ ವೈರಸ್ ಮೂಲ ವುಹಾನ್ ಅಲ್ಲವೆಂದ ಚೀನಾ!

ಕೇಂದ್ರ ಆರೋಗ್ಯ ಸಚಿವಾಲಯ ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. 2020ರ ಜನವರಿಯಿಂದ ಮಾರ್ಚ್ 2024ರವರೆಗೆ 3 ಹಂತದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಮೊದಲ ಹಂತ 2020ರ ಜನವರಿಯಿಂದ ಜೂನ್‌ವರೆಗೆ, ಎರಡನೇ ಹಂತ ಜುಲೈನಿಂದ 2021ರ ಮಾರ್ಚ್‌ವರೆಗೆ ಹಾಗೂ ಮೂರನೇ ಹಂತ ಏಪ್ರಿಲ್‌ 2021ರಿಂದ ಮಾರ್ಚ್‌ 2024ರವರೆಗೆ ನಿಗದಿಯಾಗಿದೆ. ಈ ಹಣವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು.

"

ಜಿಲ್ಲೆಗಳಲ್ಲಿ ತಲಾ 500 ಹಾಸಿಗೆ ಇಡಿ: ಕೇಂದ್ರ

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಪ್ರತಿ ಜಿಲ್ಲೆಗಳಲ್ಲೂ 500 ಹಾಸಿಗೆಗಳನ್ನು ತಕ್ಷಣವೇ ಗುರುತಿಸಿ ಮೀಸಲಿಡಲು ಕೇಂದ್ರ ಸರ್ಕಾರ ಸೂಚಿಸಿದೆ. ಹಾಗೆಯೇ ದೇಶದ ಪ್ರತಿ ಮೂಲೆಮೂಲೆಯಲ್ಲೂ ಪರಿಣಾಮಕಾರಿ ಕಣ್ಗಾವಲು ಮತ್ತು ಸ್ಕ್ರೀನಿಂಗ್‌ಗೆ ಒಳಪಡುವ ತಾತ್ಕಾಲಿಕ ಆರೊಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಎಲ್ಲಾ ಜಿಲ್ಲೆಗಳಿಗೆ ತಿಳಿಸಿದೆ. 

ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳ ತಂಡ ಪ್ರತಿಯೊಂದು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೋನಾ ನಿಗ್ರಹಕ್ಕೆ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಲಿದೆ ಎಂದು ಸರ್ಕಾರ ತಿಳಿಸಿದೆ.