Asianet Suvarna News Asianet Suvarna News

2.5 ವರ್ಷ ಬಳಿಕ ದೇಶದಲ್ಲಿ ಶೂನ್ಯ ಕೊರೋನಾ ಸಾವು..!

ಮಂಗಳವಾರ ಕೇವಲ 625 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಕೂಡ ಎರಡೂವರೆ ವರ್ಷಗಳ ಕನಿಷ್ಠ ಎನಿಸಿಕೊಂಡಿದೆ.

After 2.5 Years Zero Corona Death in India grg
Author
First Published Nov 9, 2022, 12:30 AM IST

ನವದೆಹಲಿ(ನ.09): ಕೊರೋನಾ ವೈರಸ್‌ನ ಅಲೆ ಉತ್ತುಂಗದಲ್ಲಿದ್ದಾಗ ಪ್ರತಿದಿನ ಸಹಸ್ರಾರು ಸಾವುಗಳನ್ನು ಕಂಡಿದ್ದ ಭಾರತದಲ್ಲಿ ಸೋಂಕಿನ ಅಬ್ಬರ ಭಾರಿ ಇಳಿಮುಖವಾಗಿದೆ. ಇದರ ಫಲವಾಗಿ ಎರಡೂವರೆ ವರ್ಷಗಳ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ಕೋವಿಡ್‌ ಸಾವು ವರದಿಯಾಗಿದೆ. ಮತ್ತೊಂದೆಡೆ, ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದ್ದು, ಮಂಗಳವಾರ ಕೇವಲ 625 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಕೂಡ ಎರಡೂವರೆ ವರ್ಷಗಳ ಕನಿಷ್ಠ ಎನಿಸಿಕೊಂಡಿದೆ.

ದೇಶದಲ್ಲಿ 2020ರ ಮಾಚ್‌ರ್‍ನಲ್ಲಿ ಮೊದಲ ಕೋವಿಡ್‌ ಸಾವು ಸಂಭವಿಸಿತ್ತು. ಕರ್ನಾಟಕದ ಕಲಬುರಗಿಯ 76 ವರ್ಷದ ವೃದ್ಧರೊಬ್ಬರು ಈ ಸೋಂಕಿಗೆ ಬಲಿಯಾದ ದೇಶದ ಪ್ರಥಮ ವ್ಯಕ್ತಿ ಎನಿಸಿಕೊಂಡಿದ್ದರು. ಆನಂತರ ಪ್ರತಿ ದಿನ ಒಂದಲ್ಲಾ ಒಂದು ಸಾವು ಸಂಭವಿಸಿ ಕೋವಿಡ್‌ ಅಲೆ ಉತ್ತುಂಗಕ್ಕೇರಿದಾಗ ಪ್ರತಿ ದಿನ ಮರಣ ಹೊಂದುವವರ ಸಂಖ್ಯೆ 4000ಕ್ಕೇರಿಕೆಯಾಗಿತ್ತು. ಶವಗಳನ್ನು ದಹಿಸಲೂ ಪರದಾಡುವಂತಹ ಹಾಗೂ ಸಾಮೂಹಿಕ ಶವ ದಹನ ಮಾಡುವಂತಹ ಪರಿಸ್ಥಿತಿ ನೆಲೆಸಿತ್ತು. ಆ್ಯಂಬುಲೆನ್ಸ್‌ ಶಬ್ದಕಂಡರೆ ಜನರು ಬೆಚ್ಚಿ ಬೀಳುವಂತಾಗಿತ್ತು. ಆದರೆ ಈಗ ದೇಶ ಶೂನ್ಯ ಸಾವಿನ ಹಂತಕ್ಕೆ ತಲುಪಿದೆ.

CORONA CRISIS: ಕರ್ನಾಟಕದಲ್ಲಿ 83 ಮಂದಿಗೆ ಕೋವಿಡ್‌: ಒಬ್ಬ ಸೋಂಕಿತೆ ಸಾವು

ಮತ್ತೊಂದೆಡೆ, 2020ರ ಏಪ್ರಿಲ್‌ 9ರಂದು ದೇಶದಲ್ಲಿ 540 ಪ್ರಕರಣಗಳು ವರದಿಯಾಗಿದ್ದವು. ಅದಾದ ಬಳಿಕ ಮಂಗಳವಾರ 625ರಷ್ಟು ಕನಿಷ್ಠ ಪ್ರಕರಣಗಳು ಪತ್ತೆಯಾಗಿವೆ. ಇದು ಕೂಡ ದಾಖಲೆಯಾಗಿದೆ.

ಹೊಸ ಪ್ರಕರಣಗಳೊಂದಿಗೆ ದೇಶದ ಒಟ್ಟಾರೆ ಕೋವಿಡ್‌ ಸೋಂಕಿತರ ಸಂಖ್ಯೆ 4,46,62,141ಕ್ಕೆ ಏರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 14021ಕ್ಕೆ ಕುಸಿದಿದೆ. ಸಾವಿನ ಸಂಖ್ಯೆ 5,30,509ರಷ್ಟಿದೆ. ಚೇತರಿಕೆ ಪ್ರಮಾಣ ಶೇ.98.78ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
 

Follow Us:
Download App:
  • android
  • ios