ಬೆಂಗಳೂರು,‌ (ಏ. 2): ಬೆಂಗಳೂರಿನಲ್ಲಿ ಕೊರೋನಾ ಜಾಗೃತಿ ಮೂಡಿಸಲು ಹೋದ ಆಶಾ ಕಾರ್ತಕರ್ತೆ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಆಶಾ ಕಾರ್ಯಕರ್ತೆ ಕೃಷ್ಣವೇಣಿ ಎನ್ನುವರು ಬೆಂಗಳೂರಿನ ಸಾಧಿಕ್ ನಗರದಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ವೇಳೆ ಏಕಾಏಕಿ ಕಿಡಿಗೇಡಿಗಳು ತಡೆದಿದ್ದಾರೆ.  ಅಲ್ಲದೇ ಕೃಷ್ಣವೇಣಿ ಅವರ ಕೈಯಲ್ಲಿದ್ದ ದಾಖಲಾತಿಗಳನ್ನು ಕಿತ್ತುಕೊಂಡು ಹರಿದಾಕಿ ಪುಂಡಾಟ ಮೆರೆದಿದ್ದರು. ಇದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಬೆಂಗಳೂರು: ಕೊರೋನಾ ಜಾಗೃತಿಗೆ ತೆರಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ! 

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಆರೋಗ್ಯದ ಬಗ್ಗೆ ಮಾಹಿತಿ ಕೇಳಲು ಬರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ, ಸರ್ಕಾರಿ ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡಬೇಕು ಎಂದಿದ್ದಾರೆ.
  ಅನಾರೋಗ್ಯದ ಸಮಸ್ಯೆಯಿದ್ದವರು ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು. ಸಹಕಾರ ಮತ್ತು ಸಂಯಮವೇ ಕೊರೋನಾ ತಡೆಗಟ್ಟಲು ಇರುವ ಏಕೈಕ ಮಾರ್ಗ ಎಂದು ಜನತೆಗೆ ಸಲಹೆ ನೀಡಿದರು. 

ಪ್ರಸಕ್ತ ತಲೆದೋರಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗೆ ಸಹಕಾರ ನೀಡದೇ ಅವರ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ.
  ಈ ಇಲಾಖೆಗಳೆಲ್ಲ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಕೆಲಸ ಮಾಡುತ್ತಿರುವುದು ಜನರ ಆರೋಗ್ಯಕ್ಕಾಗಿ ಎಂಬುದನ್ನು ಮರೆಯಬಾರದು ಎಂದು ಜಮೀರ್ ಕಿವಿ ಮಾತು ಹೇಳಿದರು.