ವಿಜಯಪುರ(ಮಾ.29): ಇಡೀ ವಿಶ್ವವೇ ಕೊರೋನಾ ಹರಡುವ ಭೀತಿಯಲ್ಲಿ ತಲ್ಲಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಡೀ ಭಾರತ ದೇಶವೇ ಲಾಕ್‌ಡೌನ್‌ ಆಗಿದೆ. ಯಾರೂ ಹೊರಗಡೆ ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ಅದನ್ನು ಲೆಕ್ಕಿಸದೆ ಭೂಪನೊಬ್ಬ ವಿಜಯಪುರದಲ್ಲಿ ಕುದುರೆ ಸವಾರಿ ನಡೆಸಿ ಶೋಕಿ ಮಾಡಿದ ಪ್ರಸಂಗ ನಡೆದಿದೆ.

ಪೊಲೀಸರು ಹಗಲು ರಾತ್ರಿ ಎನ್ನದೆ ಮಹಾಮಾರಿ ಕೊರೋನಾ ಜನರಿಗೆ ಹರಡದಂತೆ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಜನರು ಬೀದಿಗಿಳಿದರೆ ಲಾಠಿ, ಬಸ್ಕಿ ಹೊಡೆಸಿ ಶಿಕ್ಷೆ ಮತ್ತೆ ಮನೆಯಿಂದ ಹೊರ ಬರದ ಹಾಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಂದು ಬೈಕ್‌, ವಾಹನಗಳ ಸಂಚಾರದಲ್ಲಿ ಕೊಂಚ ಇಳಿಕೆ ಕಂಡು ಬಂದಿತು. ಆದರೆ, ಸ್ಟೇಶನ್‌ ರಸ್ತೆ ಬಡಾವಣೆಯ ಸೈಬಾಜ್‌ ಎಂಬಾತ ನಗರದ ಪ್ರಮುಖ ಬೀದಿಗಳಲ್ಲಿ ಕುದುರೆ ಸವಾರಿ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯಲ್ಲಿ ತೆರೆದ ಚೆಕ್‌ಪೋಸ್ಟ್‌ ರಾಜ್ಯದಲ್ಲೇ ಪ್ರಥಮ: DCM ಕಾರಜೋಳ

ಅಲ್ಲಲ್ಲಿ ಕೊರೋನಾ ನಿಯಂತ್ರಣಕ್ಕೆ ಜನ ಸಂಚಾರ ತಡೆಯಲು ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಇದು ಅಚ್ಚರಿ ತಂದಿತು. ನೋಡು ನೋಡುತ್ತಿದ್ದಂತೆಯೇ ಯುವಕ ಕುದುರೆ ಏರಿ ಮುಂದೆ ಸಾಗಿದ. ಅಷ್ಟರಲ್ಲಿಯೇ ಆ ಯುವಕ ತನ್ನ ಮನೆಯಿಂದ ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಕೇಂದ್ರ ಬಸ್‌ ನಿಲ್ದಾಣ ರಸ್ತೆ ಮುಂತಾದ ಕಡೆಗಳಲ್ಲಿ ಮಿಂಚಿನ ಸಂಚಾರ ನಡೆಸಿಯೇ ಬಿಟ್ಟಿದ್ದ.

ಕೊರೋನಾ ತಡೆಯಲು ಸರ್ಕಾರದ ಸೂಚನೆ ಪಾಲಿಸಿ: ಮಲ್ಲಿಕಾರ್ಜುನ ಶ್ರೀಗಳು

ಈ ಯುವಕ ಯಾವುದೇ ಕೆಲಸಕ್ಕಾಗಿ ಕುದುರೆ ಮೇಲೆ ಹೊರಟಿಲ್ಲ. ಬರೀ ಶೋಕಿಗಾಗಿ ಕುದುರೆ ಸವಾರಿ ಮಾಡುತ್ತಿದ್ದಾನೆ ಎಂದು ಅರಿತ ಪೊಲೀಸರು ಆತನನ್ನು ತಡೆದು ಕೊರೋನಾ ಮಹಾಮಾರಿ ರುದ್ರನರ್ತನದ ಭೀಕರತೆಯ ಬಗ್ಗೆ ಮನ ಮುಟ್ಟುವಂತೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ಇತ್ತ ಕಡೆಗೆ ಕುದುರೆ ಮೇಲೆ ಸುಳಿದರೆ ಬೇರೆಯೇ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ ಕುದುರೆ ಸವಾರಿ ಯುವಕ ತೆಪ್ಪಗೆ ಮನೆಗೆ ತೆರಳಿದ.