ಬೆಂಗಳೂರು(ಏ.05): ಕರ್ನಾಟಕದಲ್ಲಿ ಏ.14ರ ನಂತರ ಹಂತ-ಹಂತವಾಗಿ ರಾಜ್ಯ ಸರ್ಕಾರ ಲಾಕ್‌ಡೌನ್‌ ಹಿಂತೆಗೆದುಕೊಳ್ಳಲಿದೆ ಎಂಬ ಪರೋಕ್ಷ ಸುಳಿವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.14ರ ನಂತರ ಲಾಕ್‌ಡೌನ್‌ ಅನ್ನು ಯಾವ ರೀತಿಯಲ್ಲಿ ಹಂತ ಹಂತವಾಗಿ ತೆಗೆಯಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಬೆಂಗಳೂರಿನ ಶಾಸಕರು, ಸಂಸದರ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದ್ದು, ಪರಿಸ್ಥಿತಿಗನುಗುಣವಾಗಿ ಲಾಕ್‌ಡೌನ್‌ ತೆಗೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

SSLC ಹೊರತುಪಡಿಸಿ ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳು ಪಾಸ್..!

ಅಲ್ಲದೆ, ಮುಖ್ಯಮಂತ್ರಿಯವರ ಸಭೆಯಲ್ಲಿ ಬೆಂಗಳೂರಲ್ಲಿ ಖಾಸಗಿ ವೈದ್ಯರ ಕ್ಲಿನಿಕ್‌ಗಳು ನಡೆಯುತ್ತಿಲ್ಲ ಎಂಬುದರ ಬಗ್ಗೆ ಶಾಸಕರು, ಸಂಸದರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಖಾಸಗಿ ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ಜನತೆಗೆ ಚಿಕಿತ್ಸೆ ನೀಡುವಂತೆ ತಿಳಿಸಿದರು. ಕೊರೋನಾ ವೈರಸ್‌ ಮಾತ್ರವಲ್ಲದೇ, ಜನರು ಇತರೆ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾರೆ. ಅವರಿಗೆ ಚಿಕಿತ್ಸೆ ನೀಡಬೇಕಾಗಿದೆ. ಹೀಗಾಗಿ ಖಾಸಗಿ ವೈದ್ಯರ ಕ್ಲಿನಿಕ್‌ಗಳು ತೆರೆಯಬೇಕು ಎಂಬ ಕಡ್ಡಾಯ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೊರೋನಾ: ಡಾಕ್ಟರ್ ಕಷ್ಟ ಸಚಿವರ ಅನುಭವಕ್ಕೆ ಬಂತು, ಅದನ್ನು ಜನರ ಮುಂದೆ ಇಟ್ರು..!

106 ಕೋಟಿ ರು. ದೇಣಿಗೆ:

ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್‌-19ಕ್ಕೆ ಶನಿವಾರ 19 ಕೋಟಿ ರು.ನಷ್ಟುದೇಣಿಗೆ ಬಂದಿದೆ. ಇದರಲ್ಲಿ ಕೆಪಿಟಿಸಿಎಲ್‌ನದ್ದು ದೊಡ್ಡ ಮೊತ್ತವಾಗಿದೆ. ಕೆಪಿಟಿಸಿಎಲ್‌ ಸಿಬ್ಬಂದಿಯ ಎರಡು ದಿನದ ವೇತನ ನೀಡಲಾಗಿದ್ದು, ಒಟ್ಟು 18 ಕೋಟಿ ರು. ಆಗಿದೆ. ಆದಿಚುಂಚನಗಿರಿ ಮಠವು 50 ಲಕ್ಷ ರು. ಬಿಬಿಎಂಪಿ 50 ಲಕ್ಷ ರು. ನೀಡಿದೆ. ಒಟ್ಟಾರೆ ಪರಿಹಾರ ನಿಧಿಗೆ 106 ಕೋಟಿ ರು.ನಷ್ಟುದೇಣಿಗೆ ಬಂದಿದೆ ಎಂದು ಮಾಹಿತಿ ನೀಡಿದರು.