ಬೆಂಗಳೂರು(ಏ.03): ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲು ಸರ್ಕಾರ ತಿರ್ಮಾನಿಸಿದೆ.

ತೋಟಗಾರಿಕೆ ಇಲಾಖೆ ಸಚಿವ ಡಾ.ನಾರಾಯಣಗೌಡ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೊರೋನಾ ಆತಂಕ: 'ಯಾವುದೇ ಕಾರಣಕ್ಕೂ ಕೇರಳ ಗಡಿ ತೆರೆಯಲು ಬಿಡೋದಿಲ್ಲ'

ರೈತರಿಂದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಪಪ್ಪಾಯ, ಅನಾನಸ್‌ ಸೇರಿದಂತೆ ಇತರೆ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಲಾಗುವುದು. ಅವುಗಳ ನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳನ್ನು ಸೇರಿಸಿ ಬೆಲೆ ನಿಗದಿ ಮಾಡಲಾಗುವುದು.ಹಾಪ್‌ಕಾಮ್ಸ್‌ ಸಹಭಾಗಿತ್ವದಲ್ಲಿ ನಗರದ ವಿವಿಧ ಭಾಗಗಳ ವಸತಿ ಸಮುಚ್ಚಯಗಳ ಬಳಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ಕೆ ತೋಟಗಾರಿಕೆ, ಬಿಬಿಎಂಪಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಂದ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಭೆಯ ಬಳಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೇಷ್ಮೆ ಬೆಲೆ ಹೆಚ್ಚಳ:

ರಾಜ್ಯದಲ್ಲಿರುವ 41 ರೇಷ್ಮೆ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಬುಧವಾರದಿಂದ ಅವಕಾಶ ಮಾಡಿಕೊಡಲಾಗಿದೆ. ಶಿಡ್ಲಘಟ್ಟ, ರಾಮನಗರ, ಕೊಳ್ಳೆಗಾಲ, ಕನಕಪುರದ ಮಾರುಕಟ್ಟೆಗಳಲ್ಲಿ ಬೆಲೆ ಹೆಚ್ಚಳವಾಗಿದೆ. ನಿನ್ನೆವರೆಗೆ ಸಿಬಿ ತಳಿಯ ರೇಷ್ಮೆ ಬೆಲೆ ಪ್ರತಿ ಕೆಜಿಗೆ 241 ರು. ಇತ್ತು. ಇಂದು 300 ರು.ಆಗಿದೆ. ಬಿವಿ ತಳಿಯ ರೇಷ್ಮೆ ಬೆಲೆಯು 300 ರು.ದಾಟಿದೆ ಎಂದು ಸಚಿವರಿಗೆ ವಿವರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.