ಬೆಂಗಳೂರು(ಏ.03): ಕೋವಿಡ್‌-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದಂತೆ ಬಡವರ ಕಲ್ಯಾಣ ಯೋಜನೆಯಡಿ ಗುರುವಾರದಿಂದಲೇ ಮಹಿಳೆಯರ ಪ್ರಧಾನಮಂತ್ರಿ ಜನಧನ್‌ ಖಾತೆಗೆ ನೇರವಾಗಿ 500 ರು. ವರ್ಗಾಯಿಸುತ್ತಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಖಾತೆದಾರರು ಬ್ಯಾಂಕ್‌ನಿಂದ ಹಣ ಪಡೆಯಲು ಏಕಕಾಲಕ್ಕೆ ಬರುವುದನ್ನು ತಪ್ಪಿಸಲು ಬ್ಯಾಂಕ್‌ ಖಾತೆಗಳ ಕಡೆ ಅಂಕಿ ಆಧಾರದ ಮೇಲೆ ನಿಗದಿತ ದಿನದಂದೇ ಖಾತೆದಾರರು ಬ್ಯಾಂಕ್‌ ಶಾಖೆಗಳಲ್ಲಿ ಹಣ ಪಡೆಯಬಹುದು.

21 ದಿನದ ಲಾಕ್‌ಔಟ್‌ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?

ಬ್ಯಾಂಕ್‌ ಖಾತೆ ಸಂಖ್ಯೆ 0 ಅಥವಾ 1 ಅಂಕಿಯಿಂದ ಕೊನೆಗೊಳ್ಳುವವರು ಏ.3ರಂದು, ಖಾತೆ ಸಂಖ್ಯೆ 2 ಅಥವಾ 3 ಅಂಕಿಯಿಂದ ಕೊನೆಗೊಳ್ಳುವವರು ಏ.4ರಂದು, 4 ಅಥವಾ 5 ಅಂಕಿಯಿಂದ ಕೊನೆಗೊಳ್ಳುವವರು ಏ.7ರಂದು, 6 ಅಥವಾ 7 ಅಂಕಿ ಹೊಂದಿದವರು ಏ.8ರಂದು, 8 ಅಥವಾ 9 ಅಂಕಿಯುಳ್ಳವರು ಏ.9ರಂದು ಬ್ಯಾಂಕ್‌ ಶಾಖೆಗಳಿಗೆ ಭೇಟಿ ನೀಡಿ ಹಣ ಪಡೆದುಕೊಳ್ಳಬಹುದು. ಏ.9ರ ನಂತರ ಯಾವುದೇ ಅವಧಿಯಲ್ಲಿ ಬ್ಯಾಂಕಿನ ಶಾಖೆಗಳಲ್ಲಿ ಹಣ ಪಡೆಯಬಹುದು ಎಂದು ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚೀಂದ್ರ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.