ಬೆಂಗಳೂರು(ಏ.03): ಕೊರೋನಾ ಸೋಂಕು ಹರಡೋಣ ಬನ್ನಿ ಎಂದು ತಮಾಷೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್‌ ಹಾಕಿದ್ದೆ. ಇದರ ಹಿಂದೆ ಬೇರೆ ಉದ್ದೇಶವಿರಲಿಲ್ಲ ಎಂದು ಆರೋಪಿ ಮುಜೀಬ್‌ ಮೊಹಮ್ಮದ್‌ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಇತ್ತೀಚಿಗೆ ಕೊರೋನಾ ಸೋಂಕು ಹರಡೋಣ ಬನ್ನಿ ಎಂದೂ ಸಾಮಾಜಿಕ ಜಾಲ ತಾಣಗಳಲ್ಲಿ ಕರೆ ನೀಡಿ ಉದ್ಧಟತನ ತೋರಿಸಿದ್ದ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ಮುಜೀಬ್‌ ಮೊಹಮ್ಮದ್‌ನನ್ನು ಸಿಸಿಬಿ ಬಂಧಿಸಿತ್ತು. ಬಳಿಕ ಏಳು ದಿನ ವಿಚಾರಣೆ ಸಲುವಾಗಿ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಮಹಾಮಾರಿ ಕೊರೋನಾ ಹರಡೋಣ ಬನ್ನಿ ಎಂದು ಕರೆ ಕೊಟ್ಟ ಟೆಕ್ಕಿ!

ಈ ಸಂಬಂಧ ಗುರುವಾರ ‘ಕನ್ನಡಪ್ರಭ’ ಜತೆ ಮಾತನಾಡಿದ ಸಿಸಿಬಿ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌, ನಗರದ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಮುಜೀಬ್‌ ಉದ್ಯೋಗದಲ್ಲಿದ್ದ. ತಾನು ತಮಾಷೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್‌ ಬರೆದಿದ್ದಾಗಿ ಹೇಳಿದ್ದಾನೆ. ಈ ಕೃತ್ಯದ ಹಿಂದೆ ಸಂಚು ಅಡಗಿರುವ ಬಗ್ಗೆ ವಿಚಾರಣೆ ನಡೆಸಲಾಯಿತು. ಆದರೆ ಇದುವರೆಗೆ ಆ ರೀತಿ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.