ಮಂಗಳೂರು(ಏ.04): ಮಂಗಳೂರಿನ ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಹಾಗೂ ಬಾಣಂತಿ ತಾಯಿಯನ್ನು ಮನೆಗೆ ಕರೆದೊಯ್ಯಲು ರಾಜ್ಯ ಸರ್ಕಾರದ ನಗು-ಮಗು ಯೋಜನೆಯ ಆ್ಯಂಬುಲೆನ್ಸ್‌ ಸೌಲಭ್ಯ ಇದೆ. ಆದರೆ ಈ ಆ್ಯಂಬುಲೆನ್ಸ್‌ ಕಳೆದ ಕೆಲವು ಸಮಯದಿಂದ ಕೆಟ್ಟು ನಿಂತಿದೆ. ಆದ್ದರಿಂದ ಪರ್ಯಾಯವಾಗಿ 108 ಆ್ಯಂಬುಲೆನ್ಸ್‌ ಮೂಲಕ ತಾಯಿ-ಶಿಶುವನ್ನು ಮನೆಗೆ ತಲುಪಿಸಲಾಗುತ್ತಿದೆ. ಈ ಮೂಲಕ ಜಿಲ್ಲಾಡಳಿತವೇ ನಿಯಮವನ್ನು ಗಾಳಿಗೆ ತೂರಲು ಅವಕಾಶ ಮಾಡಿಕೊಟ್ಟಂತಾಗಿದೆ.

ನಿಯಮ ಪ್ರಕಾರ 108 ಆ್ಯಂಬುಲೆನ್ಸ್‌ನ್ನು ಆಸ್ಪತ್ರೆಗೆ ದಾಖಲಿಸಲು ಮಾತ್ರ ಬಳಸಬೇಕು. ಹೆರಿಗೆ ಆದವರನ್ನು ಮನೆಗೆ ತಲುಪಿಸಲು ಈ ಆ್ಯಂಬುಲೆನ್ಸ್‌ನ್ನು ಉಪಯೋಗಿಸುವಂತಿಲ್ಲ. ಆದರೆ ನಗು-ಮಗು ಆ್ಯಂಬುಲೆನ್ಸ್‌ ಕೆಟ್ಟು ನಿಂತ ಕಾರಣ 108 ಆ್ಯಂಬುಲೆನ್ಸ್‌ನಲ್ಲಿ ತಾಯಿ, ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿಕೊಡಲಾಗುತ್ತಿದೆ.

'ಕೊರೋನಾ ಹೋರಾಟಕ್ಕೆ ಪೂರ್ಣ ಸಹಕಾರ, ಈ ವಿಚಾರದಲ್ಲಿ ರಾಜಕೀಯ ಇಲ್ಲ'

ಈ ರೀತಿ ಕಳುಹಿಸಿಕೊಡಲು ಜಿಲ್ಲಾಡಳಿತವೇ ಅವಕಾಶ ಮಾಡಿಕೊಟ್ಟಿದೆ ಎಂಬ ಆರೋಪ ವ್ಯಕ್ತವಾಗಿದೆ. ಮಾತ್ರವಲ್ಲ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದಾಗ ಬಾರದಿದ್ದರೆ, ಜಿಲ್ಲಾ ಕಂಟ್ರೋಲ್‌ ರೂಂಗೆ ಕರೆ ಮಾಡಿದರೆ ಅವರೇ 108 ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ತಮ್ಮದಲ್ಲದ ಕಾರ್ಯಕ್ಕೆ ವ್ಯಾಪ್ತಿ ಮೀರಿ 108 ಆ್ಯಂಬುಲೆನ್ಸ್‌ ಚಾಲಕರು ತೆರಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.

108ರಲ್ಲಿ ತೆರಳಿದರೆ ಏನು ಅಡ್ಡಿ?

ಸರ್ಕಾರ ಯಾವುದೇ ಕಾರಣಕ್ಕೂ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್‌ನಲ್ಲಿ ಎಷ್ಟೇ ಸುರಕ್ಷಿತ ಇದ್ದರೂ ತಾಯಿ, ಮಗುವನ್ನು ಕರೆದುಕೊಂಡು ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿ ನಿಯಮ ರೂಪಿಸಿದೆ. ಆದರೆ ಪ್ರಸ್ತುತ ಈ ಎಲ್ಲ ನಿಯಮಗಳನ್ನು ಜಿಲ್ಲಾಡಳಿತವೇ ಗಾಳಿಗೆ ತೂರಿದೆ ಎಂಬ ಆರೋಪ ವ್ಯಕ್ತವಾಗಿದೆ. ನಿಯಮ ಮೀರಿ 108 ಆ್ಯಂಬುಲೆನ್ಸ್‌ನ್ನು ತುರ್ತು ಬಳಸುವಂತೆ ಅನುಮತಿ ನೀಡಿರುವುದು ಟೀಕೆಗೂ ಕಾರಣವಾಗಿದೆ.

ದುರಸ್ತಿಗೆ ಗ್ಯಾರೇಜ್‌ ಕೊರತೆ

ನಗು-ಮಗು ಆ್ಯಂಬುಲೆನ್ಸ್‌ ವಾರದ ಹಿಂದೆ ಬಿ.ಸಿ.ರೋಡ್‌ನ ಬ್ರಹ್ಮರಕೂಟ್ಲು ಬಳಿ ಕೆಟ್ಟು ನಿಂತಿತ್ತು. ಅದರಲ್ಲಿದ್ದ ತಾಯಿ-ಮಗುವನ್ನು ಬೇರೊಂದು ವಾಹನದಲ್ಲಿ ಮನೆಗೆ ತಲುಪಿಸಲಾಗಿತ್ತು. ಬಳಿಕ ನಗು-ಮಗು ಆ್ಯಂಬುಲೆನ್ಸ್‌ನ್ನು ಇನ್ನೊಂದು ವಾಹನದಲ್ಲಿ ಎಳೆದುಕೊಂಡು ಮಂಗಳೂರಿಗೆ ತರಲಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಗ್ಯಾರೇಜ್‌ ಸಿಗದೆ ನಗು-ಮಗು ಆ್ಯಂಬುಲೆನ್ಸ್‌ ದುರಸ್ತಿ ಕಂಡಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

108 ಆ್ಯಂಬುಲೆನ್ಸ್‌ಗೆ ಸುರಕ್ಷಾ ಕಿಟ್‌ ವಿಳಂಬ

108 ಆ್ಯಂಬುಲೆನ್ಸ್‌ ಚಾಲಕರಿಗೆ ರೋಗಿಯನ್ನು ಆ್ಯಂಬುಲೆನ್ಸ್‌ಗೆ ಸೇರಿಸಿ ಆಸ್ಪತ್ರೆಗೆ ದಾಖಲಿಸುವ ವೇಳೆ ಬಳಸುವ ಅಗತ್ಯ ಸುರಕ್ಷಾ ಕವಚವನ್ನು ಗುತ್ತಿಗೆ ಸಂಸ್ಥೆ ಪೂರೈಕೆಯಾಗಿದ್ದು ಮಾ.30ರಂದು. ಅದಕ್ಕೂ ಮೊದಲೇ, ಇತ್ತೀಚೆಗೆ ದೃಢಪಟ್ಟಿರುವ ಪುತ್ತೂರಿನ ಕೊರೋನಾ ಸೋಂಕಿತನನ್ನು ಮಾ.28ರಂದು 108 ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಈ ಆ್ಯಂಬುಲೆನ್ಸ್‌ನಲ್ಲಿ ಆಗ ಕಾರ್ಯನಿರ್ವಹಿಸಿದವರನ್ನು ನಿಗಾದಲ್ಲಿ ಇರಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

ನಗು-ಮಗು ಆ್ಯಂಬುಲೆನ್ಸ್‌ ಕೆಟ್ಟುನಿಂತ ಕಾರಣ ಅನಿವಾರ್ಯವಾಗಿ 108 ಆ್ಯಂಬುಲೆನ್ಸ್‌ ಮೂಲಕ ತಾಯಿ-ಮಗುವನ್ನು ಮನೆಗೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕೆಟ್ಟುಹೋದ ಆ್ಯಂಬುಲೆನ್ಸ್‌ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೇಡಿಗೋಷನ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್‌ ರೈ ತಿಳಿಸಿದ್ದಾರೆ.

-ಆತ್ಮಭೂಷಣ್‌