ಮಂಗಳೂರು(ಮಾ.29): ದೇರಳಕಟ್ಟೆಜಂಕ್ಷನ್‌ ಮತ್ತು ತೊಕ್ಕೊಟ್ಟು ಒಳಪೇಟೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಲು ಮುಂದಾಗಿದ್ದ ಸುಮಾರು ಐದು ಬೈಕ್‌ ಸವಾರರನ್ನು ತಡೆದ ಪೊಲೀಸರು ಬಸ್ಕಿ ಹೊಡೆಸಿ ಕಳುಹಿಸಿದ್ದಾರೆ. ಈ ನಡುವೆ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಬಂದಿರುವ ಊಟವನ್ನು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಉಳಿದುಕೊಂಡಿದ್ದ ಭಿಕ್ಷುಕರಿಗೆ ವಿತರಿಸುವ ಮೂಲಕ ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ ರಂಜಿತ್‌ ಕಾರ್ಯ ಮಾನವೀಯತೆಗೆ ಸಾಕ್ಷಿಯಾಯಿತು.

ಕೇರಳ-ಮಂಗಳೂರು ರಸ್ತೆ ತೆರವುಗೊಳಿಸುವ ಕುರಿತು ಕೇಂದ್ರ ಸರ್ಕಾರ ಜಿಲ್ಲೆಯ ನೋಡೆಲ್‌ ಅಧಿಕಾರಿಯಿಂದ ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಮುಕ್ತವಾಗಿ ಬಿಡಲಾಗಿದೆ ಅನ್ನುವ ಸುಳ್ಳು ಮಾಹಿತಿ ಗಡಿಭಾಗದ ಜನರನ್ನು ಕೆಲಕಾಲ ಆತಂಕಕ್ಕೆ ಒಳಪಡಿಸಿತ್ತು. ಆದರೆ ತಲಪಾಡಿ ಜಂಕ್ಷನ್‌ನಲ್ಲಿ 20ಕ್ಕೂ ಅಧಿಕ ಪೊಲೀಸರು ಠಿಕಾಣಿ ಹೂಡಿ ಕೇರಳ ಭಾಗದ ವಾಹನಗಳನ್ನು ತಡೆಯುತ್ತಲೇ ಇದ್ದಾರೆ.

ಮಂಗ್ಳೂರು ಬಳಿಕ ಮತ್ತೊಂದು ಜಿಲ್ಲೆಯತ್ತ ಸುಧಾಮ್ಮನ ಸಹಾಯ ಹಸ್ತ

ಲಾರಿಯಲ್ಲಿ ಬಂದ ಮಾನಸಿಕ ಅಸ್ವಸ್ಥನೋರ್ವ ತಲಪಾಡಿ ಗಸ್ತು ನಿರತ ಪೊಲೀಸರ ಬಳಿ ನಿಂತು ಕಿರಿಕ್‌ ಮಾಡುತ್ತಿದ್ದ. ಪೊಲೀಸರು ಸಮಾಧಾನಿಸಿದರೂ ಕೇಳದೆ ಉಗ್ರ ರೀತಿಯಲ್ಲಿ ವರ್ತಿಸುತ್ತಿದ್ದ. ಆತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸಿನ ಗಾಜಿಗೆ ಕಲ್ಲು ಹೊಡೆದು ಹಾನಿಗೊಳಿಸಿದ್ದಾನೆ.