ಬೆಂಗಳೂರು(ಮಾ.28): ಬೆಂಗಳೂರಿನ ಸಂಶೋಧನಾ ಸಂಸ್ಥೆಯೊಂದು ಕೊರೋನಾ ವೈರಸ್‌ ಹರಡದಂತೆ ತಡೆಯುವ ಯಂತ್ರವನ್ನು ಶೋಧಿಸಿರುವುದಾಗಿ ಹೇಳಿಕೊಂಡಿದೆ. ಮೈಕ್ರೋ ಓವನ್‌ ಗಾತ್ರದ ಯಂತ್ರ ಇದಾಗಿದ್ದು, ಇದನ್ನು ಮನೆ, ಶಾಲೆ, ಕಚೇರಿ, ಸಭಾಂಗಣ ಅಥವಾ ಕಾರಿನಲ್ಲಿ ಇಟ್ಟುಕೊಂಡರೆ ಅಲ್ಲಿ ಕೊರೋನಾ ಸೋಂಕು ಹರಡುವುದಿಲ್ಲ ಎನ್ನಲಾಗಿದೆ.

ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಸಂಶೋಧನಾ ಸಂಸ್ಥೆಯಾಗಿರುವ ಡಿ ಸ್ಕೇಲೀನ್‌ ಎಂಬ ಸಂಸ್ಥೆಯಲ್ಲಿ ಈ ಯಂತ್ರ ತಯಾರಿಸಲಾಗಿದೆ. ಶೀಘ್ರವೇ ಇದನ್ನು ಅಮೆರಿಕದ ಮೇರಿಲ್ಯಾಂಡ್‌ ಯುನಿವರ್ಸಿಟಿಗೆ ಕಳಿಸಿ ಪರೀಕ್ಷೆ ಮಾಡಿಸುವುದಾಗಿ ಸಂಸ್ಥೆಯ ಚೇರ್ಮನ್‌ ಹಾಗೂ ವಿಜ್ಞಾನಿ ಡಾ

ರಾಜಾ ವಿಜಯ್‌ ಕುಮಾರ್‌ ಹೇಳಿದ್ದಾರೆ. ದೇಶದಲ್ಲಿ ಕೊರೋನಾ ಹರಡುತ್ತಿದ್ದಂತೆ ಕೇಂದ್ರ ಆರೋಗ್ಯ ಇಲಾಖೆಗೂ ಈ ಯಂತ್ರದ ಕುರಿತು ಅವರು ಮಾಹಿತಿ ನೀಡಿದ್ದಾರೆ.

‘ನಮ್ಮ ಸಂಸ್ಥೆಯಲ್ಲಿ ಒಬ್ಬ ವಿಜ್ಞಾನಿಗೆ ನೆಗಡಿ ಅಥವಾ ಜ್ವರ ಬಂದರೆ ಕ್ರಮೇಣ ಎಲ್ಲರೂ ಹುಷಾರಿಲ್ಲದೆ ರಜೆ ಹಾಕುತ್ತಿದ್ದರು. ಅದನ್ನು ತಪ್ಪಿಸುವುದಕ್ಕೋಸ್ಕರ ವಾತಾವರಣದಲ್ಲಿರುವ ವೈರಸ್‌ ನಿಷ್ಕಿ್ರಯಗೊಳಿಸುವ ಯಂತ್ರವೊಂದನ್ನು ಸಂಶೋಧಿಸಲು ಈ ವರ್ಷ ಆರಂಭಿಸಿದ್ದೆವು. ಕೊರೋನಾವೈರಸ್‌ ಪತ್ತೆಯಾಗುವುದಕ್ಕಿಂತ ಮೊದಲೇ ಇದರ ಸಂಶೋಧನೆ ಆರಂಭವಾಗಿತ್ತು. ಈಗ ಯಶಸ್ವಿಯಾಗಿದೆ. ಇದು ಕೊರೋನಾ ಸೋಂಕಿತರನ್ನು ಗುಣಪಡಿಸುವುದಿಲ್ಲ. ಬದಲಿಗೆ, ಸೀಮಿತ ವಾತಾವರಣದಲ್ಲಿ ಕೊರೋನಾವೈರಸ್‌ ನಿಷ್ಕಿ್ರಯಗೊಳ್ಳುವಂತೆ ಮಾಡಿ, ಒಬ್ಬರಿಂದ ಒಬ್ಬರಿಗೆ ಹರಡುವ ಅದರ ಶಕ್ತಿಯನ್ನು ಕಿತ್ತುಕೊಳ್ಳುತ್ತದೆ’ ಎಂದು ವಿಜಯ್‌ ಕುಮಾರ್‌ ಹೇಳಿದ್ದಾರೆ.

ಈ ಯಂತ್ರಕ್ಕೆ ಸ್ಕೇಲೀನ್‌ ಹೈಪರ್‌ಚಾಜ್‌ರ್‍ ಕೊರೋನಾ ಕ್ಯಾನನ್‌ (ಶೈಕೋಕ್ಯಾನ್‌) ಎಂದು ಹೆಸರಿಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿದರೆ 600 ರು.ದಿಂದ 4000 ರು. ದರದಲ್ಲಿ ಇದು ಲಭ್ಯವಾಗುವಂತೆ ಮಾಡಬಹುದು. ಅಮೆರಿಕದ ಪರೀಕ್ಷೆಯಲ್ಲಿ ಪಾಸಾದರೆ ಇದರ ಸೂತ್ರವನ್ನು ಉಚಿತವಾಗಿ ಎಲ್ಲರಿಗೂ ನೀಡಲು ಸಿದ್ಧ. ಯಾರು ಬೇಕಾದರೂ ಉತ್ಪಾದಿಸಬಹುದು ಎಂದೂ ತಿಳಿಸಿದ್ದಾರೆ.