ಹಾವೇರಿ(ಏ.01): ಕೊರೋನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರಿಂದ ಸೇವೆ ಸಿಗುತ್ತಿಲ್ಲ ಎಂಬ ಆರೋಪಗಳ ಮಧ್ಯೆಯೂ ನಗರದ ವೈದ್ಯರೊಬ್ಬರು ವ್ಯಕ್ತಿಯೊಬ್ಬರು ಚಿಕನ್‌ ತಿನ್ನುವಾಗ ಗಂಟಲಲ್ಲಿ ಸಿಕ್ಕಿಸಿಕೊಂಡಿದ್ದ ಮೂಳೆಯನ್ನು ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ.

ಹಾನಗಲ್ಲ ತಾಲೂಕಿನ ಉಪ್ಪುಣಸಿ ಗ್ರಾಮದ ವ್ಯಕ್ತಿ ಬಾಯಿಚಪಲಕ್ಕೆ ಹೋಗಿ ತೊಂದರೆಗೆ ಸಿಲುಕಿಕೊಂಡಿದ್ದರು. ಭಾನುವಾರ ರಾತ್ರಿ ಚಿಕನ್‌ ತಿನ್ನುವ ವೇಳೆ ಮೂಳೆಯೊಂದು ಗಂಟಲಲ್ಲಿ ಸಿಕ್ಕಿಕೊಂಡಿದೆ. ರಾತ್ರಿಯಿಡಿ ಒದ್ದಾಡಿದ ಆತ ಬೆಳಗ್ಗೆ ಇಲ್ಲಿಯ ಮಲ್ಲಾಡದ ಆಸ್ಪತ್ರೆಯ ಡಾ. ಗಿರೀಶ ಮಲ್ಲಾಡದ ಅವರಲ್ಲಿಗೆ ಬಂದು ತೋರಿಸಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು, ಎಂಡೋಸ್ಕೋಪಿ ಮೂಲಕ ಆತನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಒಂದೂವರೆ ಸೆಂಟಿಮೀಟರ್‌ ಉದ್ದದ ಮೂಳೆಯನ್ನು ಹೊರತೆಗೆದಿದ್ದಾರೆ.

ಕೊರೋನಾ ಭೀತಿ: ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಯನ್ನೇ ಮುಟ್ಟದ ವೈದ್ಯರು!

ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಗಿರೀಶ ಮಲ್ಲಾಡದ, ಉಪ್ಪುಣಸಿ ಗ್ರಾಮದ ವ್ಯಕ್ತಿ ಗಂಟಲಲ್ಲಿ ಮೂಳೆ ಸಿಕ್ಕಿಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದ. ಕೊರೋನಾ ಹರಡದಂತೆ ಲಾಕ್‌ಡೌನ್‌ ಆಗಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ಎಲ್ಲ ಕಡೆ ಅನುಸರಿಸಲಾಗುತ್ತಿದೆ. ಆದರೂ ತುರ್ತು ಸೇವೆಯನ್ನು ನಾವು ನೀಡುತ್ತಿದ್ದೇವೆ. ಎಂಡೋಸ್ಕೋಪಿ ಮೂಲಕ ಆತನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮೂಳೆಯನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.