ಬೆಂಗಳೂರು(ಮಾ.29): ರಾಜ್ಯದಲ್ಲಿ ಕೊರೋನಾ ಸೋಂಕು ರಣಕೇಕೆ ಹಾಕುತ್ತಿದ್ದು, ಈಗಾಗಲೇ ಮೂರು ವ್ಯಕ್ತಿಗಳನ್ನು ಬಲಿ ಪಡೆದಿದೆ. ವಿಶೇಷವೆಂದರೆ, ದುಬೈ ಹಾಗೂ ಸೌದಿ ಅರೇಬಿಯಾ (ಮೆಕ್ಕಾ) ಪ್ರವಾಸದಿಂದ ವಾಪಸಾಗಿರುವ ವ್ಯಕ್ತಿಗಳಲ್ಲೇ ಅತಿ ಹೆಚ್ಚು ಸೋಂಕುಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು 82 ಸೋಂಕಿತರ ಪೈಕಿ 40 ಮಂದಿ ದುಬೈ ಅಥವಾ ಮೆಕ್ಕಾದಿಂದ ಆಗಮಿಸಿದವರು ಹಾಗೂ ಅವರ ಸಂಪರ್ಕ ಹೊಂದಿದವರು. ಆಘಾತಕಾರಿ ಎಂದರೆ ಒಟ್ಟಾರೆ ಸೋಂಕಿತರ ಪೈಕಿ 28 ಮಂದಿ ವಿದೇಶ ಪ್ರವಾಸ ಕೈಗೊಳ್ಳದಿದ್ದರೂ ವೈರಸ್‌ ಬಾಧೆಗೀಡಾದವರು.

ಶನಿವಾರ ರಾತ್ರಿ ವರೆಗಿನ ವರದಿ ಪ್ರಕಾರ, ದುಬೈನಿಂದ ಆಗಮಿಸಿರುವ 19 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಇವರಿಂದ ಮತ್ತೆ 7 ಮಂದಿಗೆ ಸೋಂಕು ಹರಡಿದೆ. ಮೆಕ್ಕಾದಿಂದ (ಸೌದಿ ಅರೇಬಿಯಾ) ಬಂದ 6 ಮಂದಿಗೆ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕದಿಂದ 8 ಮಂದಿಗೆ ಹಬ್ಬಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

ಉಳಿದಂತೆ, ಅಮೆರಿಕದಿಂದ ಆಗಮಿಸಿರುವವರಿಗೆ 7, ಲಂಡನ್‌ನಿಂದ ಆಗಮಿಸಿರುವವರಿಗೆ 8, ಸ್ಪೇನ್‌ನಿಂದ ಆಗಮಿಸಿರುವವರಿಗೆ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ.

22 ಸ್ಥಳೀಯರಿಗೆ ಸೋಂಕು:

ಬಹುತೇಕ ಮಂದಿಗೆ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿರುವವರಿಗೆ ಸೋಂಕು ಆವರಿಸಿದೆ. ಆದರೆ, ಸೋಂಕಿತರಿಂದ ಸ್ಥಳೀಯವಾಗಿ ಸಂಪರ್ಕ ಸಾಧಿಸಿದವರಿಗೂ ಸೋಂಕು ಹರಡುತ್ತಿದೆ. ಈವರೆಗೆ 28 ಮಂದಿಗೆ ಸೋಂಕು ಹರಡಿದ್ದು, ಶನಿವಾರ ಒಂದೇ ದಿನ 16 ಮಂದಿ ಸ್ಥಳೀಯರಿಗೆ ಬೇರೆಯವರಿಂದ ಸೋಂಕು ಹರಡಿದೆ.

ಇದರಲ್ಲಿ ಸೌದಿ ಅರೇಬಿಯಾ ಪ್ರವಾಸದಿಂದ ಆಗಮಿಸಿದ ಒಬ್ಬ ವ್ಯಕ್ತಿಯಿಂದಲೇ 5 ಮಂದಿಗೆ ಸೋಂಕು ಹರಡಿದ್ದರೆ, ಲಂಡನ್‌ನಿಂದ ಆಗಮಿಸಿರುವ 51 ವರ್ಷದ ಪುರುಷನಿಂದ ನಾಲ್ಕು ಮಂದಿಗೆ (ಇಬ್ಬರು ಮನೆಕೆಲಸದವರು ಸೇರಿ) ಸೋಂಕು ಆವರಿಸಿದೆ. ಮತ್ತೊಬ್ಬ ವ್ಯಕ್ತಿಯಿಂದ ಮೂರು ಮಂದಿಗೆ ಸೋಂಕು ಹರಡಿದೆ. ಇವರಾರ‍ಯರೂ ಸಹ ಮನೆಯಲ್ಲೇ ಪ್ರತ್ಯೇಕವಾಗಿರುವ ಹಾಗೂ ಮನೆಯಲ್ಲಿರುವ ಸದಸ್ಯರೊಂದಿಗೆ ಸಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಿಲ್ಲ. ಇವರ ಬೇಜವಾಬ್ದಾರಿತನದಿಂದ 22 ಮಂದಿಗೆ ಸೋಂಕು ಆವರಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಇದರಲ್ಲಿ ನಂಜನಗೂಡಿನ 35 ವರ್ಷದ ವ್ಯಕ್ತಿ, ತುಮಕೂರು ಶಿರಾದ ಮೃತ ವೃದ್ಧ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಹಸುಗೂಸಿಗೆ ಯಾವುದೇ ಪ್ರವಾಸ ಹಿನ್ನೆಲೆ ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕವಿಲ್ಲದಿದ್ದರೂ ಸೋಂಕು ದೃಢಪಟ್ಟಿದೆ.

ಸೋಂಕಿತರ ವಯಸ್ಸು

10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು - 3

10 ರಿಂದ 50 ವರ್ಷ - 44

50 ವರ್ಷಕ್ಕಿಂತ ಮೇಲ್ಪಟ್ಟವರು - 19

ಸೋಂಕಿತರು

* ಪುರುಷರು - 47

* ಮಹಿಳೆಯರು- 29

ಮೃತಪಟ್ಟವರ ಪ್ರಯಾಣದ ಹಿನ್ನೆಲೆ

ವ್ಯಕ್ತಿ - ಸ್ಥಳ- ಪ್ರವಾಸದ ಹಿನ್ನೆಲೆ

76 ವರ್ಷದ ವೃದ್ಧ - ಕಲಬುರ್ಗಿ - ಮೆಕ್ಕಾ ಯಾತ್ರೆ (ಸೌದಿ ಅರೇಬಿಯಾ)

67 ವರ್ಷದ ವೃದ್ಧೆ - ಗೌರಿಬಿದನೂರು - ಮೆಕ್ಕಾ ಯಾತ್ರೆ (ಸೌದಿ ಅರೇಬಿಯಾ)

60ರ ವೃದ್ಧ - ಸಿರಾ (ತುಮಕೂರು), ಧರ್ಮ ಪ್ರಚಾರಕ್ಕಾಗಿ ದೆಹಲಿಗೆ