ಉಡುಪಿ(ಏ.03): ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವೃದ್ಧನ ಶವಸಂಸ್ಕಾರಕ್ಕೆ ಸಂಬಂಧಿಕರು ಕೊರೋನಾ ಭೀತಿಯಿಂದ ಒಪ್ಪದಿದ್ದಾಗ, ಉಡುಪಿಯ ಜಿಲ್ಲಾ ನಾಗರಿಕ ಸಮಿತಿ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕಿನ ಕಮಲಶಿಲೆಯ ನಿವಾಸಿ ಮಂಜುವೀರ (80) ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ, ಅಲ್ಲಿದ್ದ ಒಳರೋಗಿಗಳನ್ನು ಬಿಡುಗಡೆ ಮಾಡಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಮನೆಗೆ ಹೋಗಲಾಗದ ಈ ವೃದ್ಧನನ್ನು ಗುಜ್ಜರಬೆಟ್ಟು ವಯೋವೃದ್ಧರ ಆಶ್ರಮಕ್ಕೆ ಸೇರಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟರು.

ಬ್ಯಾನರ್ ಕಲಾವಿದನ ಸಂಕಷ್ಟಕ್ಕೆ ಸ್ಪಂದಿಸಿದ 'ರಾಜಕುಮಾರ'

ಮೃತರ ಕುಟುಂಬಿಕರಿಗೆ ಮಾಹಿತಿ ನೀಡಿದರೂ, ಕೊರೋನಾ ರೋಗಿಗಳಿದ್ದ ಜಿಲ್ಲಾಸ್ಪತ್ರೆಯಲ್ಲಿ ವೃದ್ಧ ಚಿಕಿತ್ಸೆ ಪಡೆದ ಹಿನ್ನೆಲೆಯ ನೆಪದಲ್ಲಿ ಕುಟುಂಬಿಕರು ಅಂತ್ಯಸಂಸ್ಕಾರಕ್ಕೆ ಹಿಂದೇಟು ಹಾಕಿದರು. ಕೊನೆಗೆ ಆಶ್ರಮ ವ್ಯವಸ್ಥಾಪಕರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸಿದರು.

ಅವರು ವೃದ್ಧರ ಮಗನನ್ನು ಕರೆಸಿ, ಆತನಿಂದ ಇಂದ್ರಾಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಅದರ ವೆಚ್ಚವನ್ನು ನಾಗರಿಕ ಸಮಿತಿ ಭರಿಸಿತು. ದುರಂತ ಎಂದರೆ, ಅವರ ಮಗ ಕೂಡ ಇದೀಗ ವಲಸೆ ಕಾರ್ಮಿಕರ ಗಂಜಿಕೇಂದ್ರಕ್ಕೆ ಸೇರಿದ್ದಾನೆ.