ಭಾರತ ಲಾಕ್‌ಡೌನ್: ವ್ಯಾಪಾರಸ್ಥರಿಂದ ದುರುಪಯೋಗ, ಗ್ರಾಹಕರ ಜೇಬಿಗೆ ಕತ್ತರಿ
ವ್ಯಾಪಾರಸ್ಥರಿಂದ ಲಾಕ್ ಡೌನ್ ದುರುಪಯೋಗ| ಕಿರಾಣಿ, ತರಕಾರಿ ವ್ಯಾಪಾರಸ್ಥರಿಂದ ಹೆಚ್ಚನ ಹಣ ವಸೂಲಿ| ಕಂಗಾಲಾದ ಗ್ರಾಹಕರು| ಅಗತ್ಯ ವಸ್ತುಗಳ ದರ ಹೆಚ್ಚಳ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಮನವಿ
ಗದಗ(ಮಾ.28): ಮಹಾಮಾರಿ ಕೊರೋನಾ ವೈರಸ್ ತಡೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಿರಾಣಿ, ತರಕಾರಿ ವ್ಯಾಪಾರಸ್ಥರು ದುರುಪಯೋಗ ಪಡಿಸಿಕೊಂಡು ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ.
95 ರೂಪಾಯಿ ಇದ್ದ ಅಡುಗೆ ಎಣ್ಣೆ ಪ್ಯಾಕೆಟ್‌ಗೆ 115 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಸಕ್ಕರೆ, ಹೆಸರು ಬೇಳೆ ಸೇರಿದಂತೆ ಪ್ರತಿಯೊಂದು ದಿನಸಿಗೆ ಕೆಜಿಗೆ ಮೂರ್ನಾಲ್ಕು ರೂಪಾಯಿ ಹೆಚ್ಚು ಪಡೆದುಕೊಳ್ಳುತ್ತಿದ್ದಾರೆ. ಗ್ರಾಹಕರು ಪ್ರಶ್ನೆ ಮಾಡಿದ್ರೆ ನಾವೇನ್ ಮಾಡೋಣ ಹೋಲ್ ಸೇಲ್ ವ್ಯಾಪಾರಸ್ಥರು ರೇಟ್ ಹೆಚ್ಚಿಗೆ ಮಾಡಿದ್ದಾರೆ ಅಂತ ಸಬೂಬು ಹೇಳುತ್ತಿದ್ದಾರೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೋನಾ ಬೀತಿ: ಊರಿಗೆ ಬಂದ 156 ಜನರಿಗೆ ಹೋಂ ಕ್ವಾರಂಟೈನ್
ಈರುಳ್ಳಿ, ಟೊಮ್ಯಾಟೊ, ಆಲೂಗಡ್ಡೆ, ಬೀನ್ಸ್, ಸೇರಿದಂತೆ ಪ್ರತಿಯೊಂದು ತರಕಾರಿ 80 ರೂಪಾಯಿ ಆಗಿದೆ. ಎರಡು ಪಟ್ಟು ಬೆಲೆ ಹೆಚ್ಚಳ ಮಾಡಿದ ವ್ಯಾಪಾರಸ್ಥರು ಗ್ರಾಹಕರನ್ನ ವಸೂಲಿ ಮಾಡುತ್ತಿದ್ದಾರೆ. ಇನ್ನು ಹಸಿ ಮೆಣಸಿನಕಾಯಿ 200 ಗಡಿ ದಾಟಿದೆ.
ಹಣ್ಣುಗಳು ರೇಟ್ ಕೂಡ ಪ್ರತಿ ಕೆಜಿಗೆ 40-50 ರೂಪಾಯಿ ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ. ದರ ಹೆಚ್ಚಳಕ್ಕೆ ಕಂಗಾಲಾದ ಗ್ರಾಹಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯ ವಸ್ತುಗಳ ದರ ಹೆಚ್ಚಳ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಮನವಿ ಮಾಡಿದ್ದಾರೆ.